ಹಿರಿಯೂರು: ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಸಬಾ ಹೋಬಳಿಯ ಕೂನಿಕೆರೆ ಎಂಬಲ್ಲಿ ನಡೆದಿದ್ದು, ಇದೀಗ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
4 ವರ್ಷಗಳ ಹಿಂದೆ ತಾಲ್ಲೂಕಿನ ಕಸಬಾ ಹೋಬಳಿಯ ಕೂನಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೂನಿಕೆರೆ ಗ್ರಾಮದ ಕರಿಯಪ್ಪ ಮತ್ತು ಲಕ್ಷ್ಮಮ್ಮ ಅವರ ಮಗನಾದ ಅಂಜಿನಪ್ಪ ಜೊತೆಗೆ ಸಂತ್ರಸ್ತೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಂಟನಗವಿ ಹಟ್ಟಿಯ ಮಹೇಶಮ್ಮ ಹಾಗೂ ರಾಮಪ್ಪ ಅವರ ಮಗಳಾದ ಅಂಜಲಿ ವಿವಾಹವಾಗಿದ್ದು, 6 ತಿಂಗಳುಗಳ ಕಾಲ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದಾರೆ. ಬಳಿಕ ವರದಕ್ಷಿಣೆ ತರುವಂತೆ ಒತ್ತಾಯಿಸಿ ಅಂಜಲಿಯವರಿಗೆ ನಿರಂತರವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮದುವೆ ವೇಳೆ 20 ಸಾವಿರ ರೂಪಾಯಿ ವರದಕ್ಷಿಣೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ವರದಕ್ಷಿಣೆ ನಾವು ಕಡಿಮೆ ಪಡೆದುಕೊಂಡಿದ್ದೇವೆ. ಹೆಚ್ಚು ವರದಕ್ಷಿಣೆ ತರುವಂತೆ ಗಂಡನ ಮನೆಯವರು ಒತ್ತಾಯಿಸಿದ್ದು, ಸಂತ್ರಸ್ತೆ ಅಂಜಲಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಾನುವಾರ ಬೆಳಿಗ್ಗೆ ಅಂಜಲಿ ಆತ್ಮಹತ್ಯೆಗೆ ಯತ್ನಿಸಿದ್ದರು. 8 ಗಂಟೆ ಆದರೂ, ಮನೆಯ ಬಾಗಿಲು ಮುಚ್ಚಿದಂಗೆ ಇದ್ದುದನ್ನು ಕಂಡಂತಹ ಸ್ಥಳೀಯರು ಅನುಮಾನಗೊಂಡು ಮನೆಯ ಬಾಗಿಲನ್ನು ಮುರಿದು ಒಳಗಡೆ ನೋಡಿದ ಸಂದರ್ಭದಲ್ಲಿ ಅಂಜಲಿ ಸಾವು ಬದುಕು ಮಧ್ಯೆ ಒದ್ದಾಡುತ್ತಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಸಂಬಂಧ ಅಂಜಲಿಯ ಸಂಬಂಧಿಕರು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, ಅಂಜಲಿ ಹಾಗೂ ಅಂಜಿನಪ್ಪನವರಿಗೆ ವಿವಾಹವಾಗಿ ಸುಮಾರು ನಾಲ್ಕು ವರ್ಷಗಳಾದರೂ ಸಹ ನೆಮ್ಮದಿಯ ಜೀವನವನ್ನು ಅಂಜಲಿ ಕಂಡಿಲ್ಲ. ಅತ್ತೆ , ಮಾವ, ಗಂಡ, ನಾದಿನಿಯ ಕಿರುಕುಳ ದಿನಕ್ಕಿಂತ ದಿನ ಹೆಚ್ಚುತ್ತಿದ್ದು, ಜೀವನದಲ್ಲಿ ಬೇಸತ್ತ ಅಂಜಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಂಜಲಿ ಮಾತನಾಡಿ, ನಮ್ಮ ತಂದೆ ತಾಯಿ ನನ್ನನ್ನು ವರದಕ್ಷಣೆಯ ಹಣವನ್ನು ನೀಡಿ ಮದುವೆ ಮಾಡಿಕೊಟ್ಟಿದ್ದು, ನನಗೆ ಇನ್ನು ಮಕ್ಕಳಾಗಿಲ್ಲ. ಮದುವೆಯಾಗಿ ಸುಮಾರು ಆರು ತಿಂಗಳ ಕಾಲ ನನ್ನ ಗಂಡ ಮಾವ ಅತ್ತೆ, ನಾದಿನಿ ನನ್ನನ್ನು ಸರಿಯಾಗಿ ನೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಸಹ ಬಯ್ಯುವುದು, ಹೊಡೆಯುವುದು ಮಾಡುತ್ತಿದ್ದರು ಅದಕ್ಕಾಗಿ ನಾನು ಆತ್ಮಹತ್ಯೆಯ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು.
ಘಟನೆ ಸಂಬಂಧ ಇದೀಗ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಂಜಲಿ ಅವರ ಅತ್ತೆ, ಮಾವ, ನಾದಿನಿ ವಿರುದ್ಧ ದೂರು ದಾಖಲಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy