ಬೆಂಗಳೂರು: ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದ್ದು, ಬಣಗಳ ನಡುವಿನ ಸಭೆಗಳು ನಡೆಯುತ್ತಿರುವುದರ ನಡುವೆಯೇ ಇದೀಗ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕ್ಯಾಪಿಟಲ್ ಹೋಟೆಲ್ ನಲ್ಲಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ವಿಜಯೇಂದ್ರ ಔತಣಕೂಟ ಏರ್ಪಡಿಸಿದ್ದು, ಸಭೆಗೆ ಕಡ್ಡಾಯವಾಗಿ ಆಗಮಿಸುವಂತೆ ಸೂಚನೆ ನೀಡಿದ್ದಾರೆ.
ಮೇಲ್ನೋಟಕ್ಕೆ ಇದು ಪಕ್ಷ ಸಂಘಟನೆಯ ಸಭೆಯಂತೆ ಕಂಡು ಬಂದಿದೆ. ಆದರೂ ಬಿಜೆಪಿಯೊಳಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್, ಅಣ್ಣಾ ಸಾಹೇಬ್ ಜೊಲ್ಲೆ ಮತ್ತಿತರರು ನಡೆಸುತ್ತಿರುವ ಪ್ರತ್ಯೇಕ ಸಭೆಗೆ ಪರ್ಯಾಯವಾಗಿ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ವಿಜಯೇಂದ್ರ ಬಣದವರು ಇದೊಂದು ಮುಂದುವರೆದ ಸಭೆಯಷ್ಟೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ, ಬಿಬಿಎಂಪಿ ಸೇರಿದಂತೆ ಪಕ್ಷ ಸಂಘಟನೆ ಕುರಿತಾಗಿ ಚರ್ಚಿಸಲು ಸಭೆ ಕರೆಯಲಾಗಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಬಿಜೆಪಿ ಮೂಲಗಳ ಪ್ರಕಾರ , ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ತಮ್ಮ ಪರವಾಗಿ ಬೆಂಬಲ ವ್ಯಕ್ತಪಡಿಸಬೇಕು ಎಂದು ಆಪ್ತರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx