ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ, ನಗರಸಭೆ , ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮತ್ತು ಪೋಲಿಸ್ ಇಲಾಖೆ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಮತ್ತು ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಣದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಿರಿಯೂರು ನಗರದ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಹಾಗೂ ಅಧ್ಯಕ್ಷರು, ತಾಲ್ಲೂಕು ಕಾನೂನು ಸೇವಾ ಸಮಿತಿ , ಹಿರಿಯೂರು ಮೊಹಮ್ಮದ್ ಮೊಯಿನುದ್ದಿನ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ನಾಮ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹದಿನಾಲ್ಕು ವರ್ಷದೊಳಗಿನ ಶಾಲೆಯಿಂದ ಹೊರಗಡೆ ಇರುವ ಯಾವುದೇ ಮಗು ಕಂಡುಬಂದರೆ, ಅವರ ಪೋಷಕರಿಗೆ ತಿಳುವಳಿಕೆ ಹೇಳಿ, ಆ ಮಗುವನ್ನು ಶಾಲೆಗೆ ಸೇರಿಸಲು ಹಾಗೂ ಕರ್ನಾಟಕವನ್ನು ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತೇವೆಂದು ಪ್ರಮಾಣ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋದನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯಿಂದ ಹಿರಿಯೂರು ನಗರದ ಪ್ರಧಾನ ರಸ್ತೆಯಾದ ರಂಜಿತ್ ಲಾಡ್ಜ್ ನವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ನಂತರ ಹಿರಿಯೂರು ನಗರದ ಗಾಂಧಿ ಸರ್ಕಲ್ ಬಳಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಘೋಷಣೆಗಳನ್ನು ಕೂಗಲಾಯಿತು.
ಇದೇ ವೇಳೆ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಫ್ ಡಿ ಎ ಅಧಿಕಾರಿಯಾದ ಜಿ.ಡಿ.ಶ್ರೀದೇವಿ, ಇಂದಿನ ಮಕ್ಕಳಿಗೆ ಶಿಕ್ಷಣವು ಅತಿ ಮುಖ್ಯವಾದದ್ದು, ಆದರಿಂದ ಈ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ . ಬಾಲ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಎಲ್ಲರೂ ಸಹ ಕೈ ಜೋಡಿಸಬೇಕಾಗಿದೆ. ಇಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಕೈಗಾರಿಕಾ ದೇಶಗಳಲ್ಲಿ ಬಾಲಕರನ್ನು ಒತ್ತಾಯ ಪೂರ್ವಕವಾಗಿ ದುಡಿಮೆ ಮಾಡಿಸಲಾಗುತ್ತಿದೆ. ಅದರಲ್ಲೂ ಸಹ ಬಾಲಕಾರ್ಮಿಕ ಪದ್ದತಿಯು ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಬೇಕಾಗಿರುವ ಕೌಶಲ್ಯ ಮತ್ತು ವಿಧ್ಯಾಭ್ಯಾಸಕ್ಕೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ, ನಿರಂತರ ದಾರಿದ್ರ್ಯ ಹಾಗೂ ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಆದಾಯದ ಸಂಭವನೀಯತೆಯ ನಷ್ಟವು ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ ಎಂದರು.
ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳನ್ನು ತೆಗೆದು ಹಾಕುವುದು, ಅವರಿಗೆ ವಿಧ್ಯಾಭ್ಯಾಸ ಒದಗಿಸುವುದು ಮತ್ತು ಅವರ ಕುಟುಂಬಗಳಿಗೆ ನೆರವಾಗುತ್ತಾ, ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ನೇರವಾಗಿ ಕೊಡುವುದರಿಂದ, ವಯಸ್ಕರಿಗೆ ಯೋಗ್ಯವಾದ ಕೆಲಸ ಕೊಡುವುದನ್ನು ರಚಿಸಿದಂತಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯಾದ ಚಿತ್ರದೇವ ಹಾಗೂ ವಿದ್ಯಾರ್ಥಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮೊಹಮ್ಮದ್ ಮೊಯಿನುದ್ದಿನ್, ಗಂಗಾಧರ ಬಡಿಗೇರ , ಶ್ರೀಮತಿ ಶಿಲ್ಪಾ ತಿಮ್ಮಾಪೂರ, ತಾಲ್ಲೂಕು ತಹಶೀಲ್ದಾರರಾದ ಎನ್. ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಎನ್.ವಿ.ಅನಿಲ್ ಕುಮಾರ್, ಎಂ.ಆರ್.ರಂಗಸ್ವಾಮಿ, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಅಲ್ಲಾ ಬಕ್ಷ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಫ್ ಡಿ ಎ ಅಧಿಕಾರಿಯಾದ ಜಿ.ಡಿ.ಶ್ರೀದೇವಿ. ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಶಿಕ್ಷಕರು, ಪತ್ರಕರ್ತರು, ಮಾಧ್ಯಮದವರು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


