ಬೆಂಗಳೂರು: ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶದ ಬೆನ್ನಲ್ಲೇ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಪ್ರದರ್ಶನದ ಕುರಿತು ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ನಟ ವಿಜಯ್ ಅವರಿಗೆ ಇರುವ ಅಪಾರ ಜನಪ್ರಿಯತೆಯು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮತಗಳಾಗಿ ಪರಿವರ್ತನೆಯಾಗಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಟ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ ಎಂಬುದು ನಮಗೆ ತಿಳಿದಿತ್ತು. ಆದರೆ ಅವರ ಆ ಜನಪ್ರಿಯತೆ ರಾಜಕೀಯವಾಗಿ ಮತಗಳ ರೂಪದಲ್ಲಿ ಇಷ್ಟು ದೊಡ್ಡ ಪ್ರಭಾವ ಬೀರಲಿದೆ ಎಂದು ನಾವು ಅಂದುಕೊಂಡಿರಲಿಲ್ಲ. ಅವರ ಪಕ್ಷವು ಪಡೆದಿರುವ ಮತಗಳ ಪ್ರಮಾಣ ಆಶ್ಚರ್ಯ ತಂದಿದೆ” ಎಂದು ತಿಳಿಸಿದರು.
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿದೆ. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾ ಅವರ ಹಾದಿಯಲ್ಲೇ ಈಗ ವಿಜಯ್ ಕೂಡ ಜನಮನ್ನಣೆ ಗಳಿಸುತ್ತಿದ್ದಾರೆ. ಆರಂಭದ ಹಂತದಲ್ಲೇ ಅವರು ತೋರಿರುವ ಈ ಸಾಧನೆ ತಮಿಳುನಾಡು ರಾಜಕೀಯದ ಹೊಸ ದಿಕ್ಸೂಚಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಜಯ್ ಅವರ ಟಿವಿ ಕೆ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ ಗಣನೀಯ ಮತ ಪ್ರಮಾಣವನ್ನು ಪಡೆದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವುದು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


