ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ಪಕ್ಷದ ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ಯಾವಾಗ ಏನು ಆಗಬೇಕೋ ಅದು ಆಗಿಯೇ ತೀರುತ್ತದೆ” ಎಂದು ಅವರು ಹೇಳಿದ್ದಾರೆ.
ನಾಯಕತ್ವದ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ತಾವು ತಲೆಬಾಗುವುದಾಗಿ ತಿಳಿಸಿದರು. ಈ ಮೂಲಕ ಪಕ್ಷದ ಆಂತರಿಕ ವಿಚಾರಗಳನ್ನು ಹೈಕಮಾಂಡ್ ಗಮನಿಸುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಇದೇ ಮೇ 15 ರಂದು ತಮ್ಮ ಜನ್ಮದಿನವಿದ್ದು, ಅಭಿಮಾನಿಗಳು ಹಾಗೂ ಬೆಂಬಲಿಗರು ಯಾವುದೇ ಕಾರಣಕ್ಕೂ ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಹಾಕಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರಳವಾಗಿ ಜನ್ಮದಿನ ಆಚರಿಸಲು ಅವರು ಮನವಿ ಮಾಡಿದ್ದಾರೆ.
ಸುಮಾರು 30–40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿ ಸಮಸ್ಯೆಗೆ ತಮ್ಮ ಸರ್ಕಾರ ನ್ಯಾಯ ಒದಗಿಸಿದೆ. ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಐತಿಹಾಸಿಕವಾದುದು ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಬ್ಯಾನರ್ ಸಂಸ್ಕೃತಿಗೆ ಬ್ರೇಕ್ ಹಾಕುವ ಮೂಲಕ ಶಿಸ್ತಿನ ನಡೆ ಪ್ರದರ್ಶಿಸಲು ಅವರು ಮುಂದಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


