ಚನ್ನಪಟ್ಟಣ: ಸಿಡಿ ಬ್ರದರುಗಳಿಗೆ ಸಿಡಿ, ವಿಡಿಯೋ, ಆಡಿಯೋ ಮಾಡುವುದೇ ಕೆಲಸ. ಹಾಸನದಲ್ಲಿ ಇಂಥದೇ ಷಡ್ಯಂತ್ರ ಮಾಡಿದರು. ಚನ್ನಪಟ್ಟಣದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಬ್ರದರ್ಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದ ಸೋಗಾಲಪಾಳ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ವಿಧಾನಸೌಧದಲ್ಲಿ ಮಾತಾಡಿರುವ ಆಡಿಯೋವನ್ನು ಅವರು ಎಲ್ಲಾ ಸಭೆಗಳಲ್ಲಿ ಕೇಳಿಸುತ್ತಿದ್ದಾರೆ. ಅವರಿಗೆ ಎಷ್ಟು ಹತಾಶೆ, ಸೋಲಿನ ಭೀತಿ ಕಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೇವಲ ಒಂದು ತುಣುಕು ಕತ್ತರಿಸಿ ಬಿಡುವುದಲ್ಲ, ಪೂರ್ಣ ಆಡಿಯೋ ಬಿಡಲಿ, ಆಗ ಅವರ ಮರ್ಯಾದೆ ಏನು ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಿಯೋ ಬಿಡುಗಡೆ ಡಿ.ಕೆ.ಸುರೇಶ್ ಬಗ್ಗೆ ಕೆಂಡಾಮಂಡಲರಾದ ಕುಮಾರಸ್ವಾಮಿ, ಸಿಡಿ ಆಡಿಯೋ, ವಿಡಿಯೋ ಬಿಡುವುದಲ್ಲಿ ಡಿಕೆ ಸಹೋದರರು ನಿಪುಣರು. ಅವರು ಇಂಥ ದಂಧೆಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆ ಆಡಿಯೋ ಹಳೆಯದು. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು. ಒಂದು ವಾರದಿಂದ ಅದನ್ನು ಕತ್ತರಿಸಿ ಹಂಚುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದ ಆಡಿಯೋ ಅದು. ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು ಐದು ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಅದನ್ನೇ ಇವರು ಚನ್ನಪಟ್ಟಣಕ್ಕೆ ತಂದು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296