ಬಿಜೆಪಿ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಾಡುವ ಮನಸ್ಸೇ ಇಲ್ಲ. ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುಪ್ರೀಂಕೋರ್ಟ್ ಆದೇಶದನ್ವಯ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ತಿಂಗಳು ಮೊದಲೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಚುನಾವಣೆ ಮಾಡುವುದಕ್ಕೆ ಸಿದ್ಧವಿಲ್ಲ. ಶೀಘ್ರ ಚುನಾವಣೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಕಾನೂನು ಪ್ರಕಾರ ಆಯೋಗ ನಡೆದುಕೊಳ್ಳುತ್ತದೆ. ಹಿಂದೆಯೂ ಕೂಡ ಆಯೋಗ ಕೋರ್ಟ್‍ಗೆ ಹೋಗಿತ್ತು. ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಹಿಂದುಳಿದವರಿಗೆ ಮೀಸಲಾತಿ ಮಾಡಬೇಕು. ಕಾಂತರಾಜ್ ಆಯೋಗದ ಮಾಹಿತಿ ಸರ್ಕಾರದ ಬಳಿ ಇದೆ. ಅದನ್ನು ಪರಿಗಣಿಸದೆ ಬೇರೆಯವರನ್ನು ನೇಮಕ ಮಾಡಿ ಸಬೂಬು ಹೇಳಲು ಮುಂದಾಗಿದೆ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ರಮ್ಯಾ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸಣ್ಣ ವಿಚಾರ. ಯತ್ನಾಳ್ ಹೇಳಿಕೆ ಮುಂದೆ ರಮ್ಯಾ ಅವರ ಟ್ವಿಟ್ ದೊಡ್ಡದಲ್ಲ ಎಂದು ಹೇಳಿದರು. ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಶೇ.27ರಷ್ಟು ಒಬಿಸಿಗೆ ಮೀಸಲಾತಿ ನೀಡಬೇಕು. ನಮ್ಮ ಮನವಿಗೆ ಚುನಾವಣಾ ಆಯೋಗ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ರಾಜ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವವಿದ್ದರೆ ಮೂರು ತಿಂಗಳೊಳಗೆ ಚುನಾವಣೆ ನಿಗದಿ ಮಾಡಲಿ ಎಂದು ಹೇಳಿದರು.
ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ನಮ್ಮ ಆಂತರಿಕ ಸಂಘರ್ಷದ ಬಗ್ಗೆ ಮಾತನಾಡುವ ಮೊದಲು ಬಿಜೆಪಿ ಅವರ ಆಂತರಿಕ ಸಂಘರ್ಷದ ಬಗ್ಗೆ ಯೋಚನೆ ಮಾಡಲಿ. ಯತ್ನಾಳ್ ಹೇಳಿಕೆ ಬಗ್ಗೆ ಚಿಂತಿಸಲಿ. 2500 ಕೋಟಿ ಕೊಟ್ಟಿದ್ದರೆ ನಾನು ಸಿಎಂ ಆಗುತ್ತಿದ್ದೆ ಎಂದು ಯತ್ನಾಳ್ ಹೇಳಿದ್ದಾರೆ.ಅವರಿಗೆ ಒಂದು ನೋಟಿಸ್ ಕೂಡ ಕೊಟ್ಟಿಲ್ಲ.
ಇದರ ಬಗ್ಗೆ ಬಿಜೆಪಿ ತನಿಖೆ ಮಾಡಲಿ. ರಮ್ಯಾ ಅವರು ಒಳ್ಳೆಯ ನಟಿ, ಸಂಸದೆಯಾಗಿದ್ದರು. ಅವರಿಗೆ ಮೆಂಟಲ್ ಸ್ಥಿತಿ ಸರಿಯಿಲ್ಲ ಎನ್ನುವ ನಲಪಾಡ್ ಹೇಳಿಕೆ ಕೂಡ ಸರಿಯಲ್ಲ. ಸಾರ್ವಜನಿಕವಾಗಿ ಹೇಳಿಕೆ ಕೊಡುವುದು ಸರಿಯಲ್ಲ. ನಾವು ಈ ರೀತಿ ಟ್ವಿಟ್‍ಗಳನ್ನು ಮಾಡುವುದನ್ನು ಬಿಡೋಣ. ಬೆಲೆ ಏರಿಕೆ ಬಗ್ಗೆ ಟ್ವಿಟ್ ಮಾಡೋಣ. ನನ್ನ ಕಾಂಗ್ರೆಸ್ ಮಿತ್ರರಿಗೆ ನಾನು ಇದನ್ನೇ ಹೇಳುವುದು ಎಂದು ಹೇಳಿದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


