ಬೆಂಗಳೂರು: ಬಿಜೆಪಿಗೆ ದ್ರೋಹ ಬಗೆದು ಹೋಗಿದ್ದಾರೆ. ಉಪಚುನಾವಣೆಯಲ್ಲಿ ಅವರಿಗೆ ಚನ್ನಪಟ್ಟಣದ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಸೇರ್ಪಡೆಯಾ ಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ಕೊನೆ ಕ್ಷಣದವರೆಗೂ ಸರ್ವ ಪ್ರಯತ್ನ ಮಾಡಿದೆವು. ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಏಕಾಏಕಿ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಅಷ್ಟಕ್ಕೂ ಯೋಗೇಶ್ವರ್ ಬಿಜೆಪಿಯಿಂದ ಬಂದವರಲ್ಲ. ಅವರು ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಬಂದಿರಲಿಲ್ಲ. ಪಕ್ಷದಲ್ಲಿ ಇದ್ದು ಇಲ್ಲದಂತಿದ್ದರು. ಮೈತ್ರಿ ಪಕ್ಷಕ್ಕೆ ದ್ರೋಹ ಬಗೆದಿರುವ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿ.ಪಿ.ಯೋಗೇಶ್ವರ್ ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂಬ ಸುದ್ದಿ ಇದೆ. ನಮ್ಮ ಮಾತು ಕೇಳದೇ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನಲ್ಲಿ ಯೋಗೇಶ್ವರ್ ಗೆ ಖಂಡಿತ ಭ್ರಮನಿರಸನ ಆಗುತ್ತದೆ ಎಂದು ಭವಿಷ್ಯ ನುಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296