ತುಮಕೂರು: ಯುವಕರು ಸುಸ್ಥಿರ ದೇಶಕಟ್ಟುವ ದೃಢ ಸಂಕಲ್ಪ ಹೊಂದಿರಬೇಕು. ದೇಶಭಕ್ತಿಯಿಂದ ಅಭಿವೃದ್ಧಿಯೆಡೆಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಆಂಜಿನಪ್ಪ ಟಿ.ಎಸ್. ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕಲ್ಪತರು ರೋವರ್ಸ್ ಮತ್ತು ರೇಂಜರ್ಸ್ ಘಟಕವು ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶಿಕ್ಷಣ ಮತ್ತು ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಬೇಕು. ಶಿಸ್ತಿನ ಬದುಕು ರೂಪಿಸಿಕೊಂಡಾಗ ವೃತ್ತಿ ಬೆಳವಣಿಗೆ ಮತ್ತು ಸಾಮಾಜಿಕ ಕೊಡುಗೆಗಳಿಗೆ ಅಡ್ಡಿಯಾಗುವಂತಹ ಗೊಂದಲಗಳಿಂದ ದೂರಾಗಬಹುದು. ಸ್ಕೌಟ್ಸ್ ಮತ್ತು ಗೈಡ್ಸ್ 1907ರಲ್ಲಿ 25 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಈಗ ಜಾಗತಿಕವಾಗಿ ಬೆಳೆದಿದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಸ್ತು, ಸಮಯ ಪಾಲನೆ ಮುಖ್ಯ ಎಂದು ತಿಳಿಸಿದರು.
ಗೈಡ್ಸ್ ನ ಜಿಲ್ಲಾ ಆಯುಕ್ತೆ ಸುಭಾಷಿಣಿ ಆರ್.ಕುಮಾರ್ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವೃತ್ತಿಪರ ಶಿಸ್ತಿನ ನಿಯಮಗಳ ಮೂಲಕ ಆರೋಗ್ಯಕರ ಮತ್ತು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರತಿಷ್ಠಿತ ಸ್ಥಾನವನ್ನು ಹೊಂದಿದೆ. ಅವರ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶಗಳನ್ನು ಪಡೆಯಲು ರೋವರ್ಸ್ ಮತ್ತು ರೇಂಜರ್ಸ್ ಗಳಿಗೆ ಸರಿಯಾದ ತರಬೇತಿ ನೀಡಬೇಕು ಎಂದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಅವರಿಗೆ ಉತ್ತಮ ವೇದಿಕೆ ಕಲ್ಪಿಸಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಬೇಕು ಎಂದು ಹೇಳಿದರು.
ಸ್ಕೌಟ್ ಮತ್ತುಗೈಡ್ಸ್ ಜಿಲ್ಲಾ ಸಂಘಟಕರಾದ ನವೀನ್ ಕುಮಾರ್ ಎಚ್.ಆರ್., ಕಲಾ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಚಾಲಕರಾದ ಡಾ.ವನಜಾಕ್ಷಿ ಈ., ಚಂದ್ರಮೌಳಿ, ಸಹಸಂಚಾಲಕರಾದ ಡಾ.ಹರ್ಷಿತ ಕೆ.ಎಸ್., ಸಿದ್ದೇಶ್ ಸಿ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx