ತುಮಕೂರು: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಎಸ್.ಬಿ.ಐ. ತುಮಕೂರು ಜಿಲ್ಲೆಯಲ್ಲಿ ಸುಮಾರು 4,500 ಕೋಟಿ ಸಾಲವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲಕ ನೀಡಿದ್ದೇವೆ. ಕೇವಲ ಮಹಿಳೆಯರೇ ಇರುವ ಈ ಸಂಘದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಧರ್ಮಸ್ಥಳ ಸಂಘವು ಆಯ್ಕೆ ಮಾಡಿ 1 ಲಕ್ಷದಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ. ಈ ಸಾಲಕ್ಕೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಜಾಮೀನು ನೀಡಿದ್ದಾರೆ ಎಂದು ಎಸ್.ಬಿ.ಐ. ಬ್ಯಾಂಕಿನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಕೆ.ಎನ್.ವಾದಿರಾಜ ರವರು ಹೇಳಿದರು.
ನಗರದ ಹನುಮಂತಪುರದ ಶ್ರೀಕೊಲ್ಲಾಪುರದಮ್ಮನ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮಾಂತರ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ವೀರೇಂದ್ರ ಹೆಗ್ಗಡೆರವರ ಕನಸು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಚೈತನ್ಯವನ್ನು ತುಂಬಿ ಸ್ವಯಂ ಉದ್ಯೋಗವನ್ನು ಹಮ್ಮಿಕೊಂಡು ಅವರು ಆರ್ಥಿಕವಾಗಿ ಸಫಲವಾಗುವುದು. ಈ ನಿಟ್ಟಿನಲ್ಲಿ ಎಸ್.ಬಿ.ಐ. ಬ್ಯಾಂಕ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರಿಗೆ ಸಾವಿರಾರು ಕೋಟಿ ಸಾಲವನ್ನು ತುಮಕೂರು ಜಿಲ್ಲೆಯಲ್ಲಿ ವಿತರಿಸಿದ್ದೇವೆ ಇವರಿಂದ ಎಂದು ಸಾಲ ಮರುಪಾವತಿ ನಿಂತಿಲ್ಲ, ಶೇ.100 ಮರುಪಾವತಿ ಆಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪನವರು ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆರವರು ಒಕ್ಕೂಟದ ಸದಸ್ಯರ ಸಹಕಾರದಿಂದ ಈ ಸಂಘ ಇಷ್ಟು ಎತ್ತರಕ್ಕೆ ಬೆಳೆದಿದೆ. ಮಹಿಳೆಯರು ಸಾಲ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ಅವರ ಸಂಸಾರ ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯದಲ್ಲಿ 50 ಲಕ್ಷ ಮಹಿಳೆಯರು ಸಂಘದ ಸದಸ್ಯರಿದ್ದಾರೆ. 1ಲಕ್ಷ ವಿದ್ಯಾರ್ಥಿಗಳು ಶಿಷ್ಯವೇತನ ಪಡೆದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 10 ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ 24,000 ಕೋಟಿ ಸಾಲ ವಿತರಿಸಲಾಗಿದೆ. ಈ ಹಣದಲ್ಲಿ ಯಾವುದೇ ಸಾಲದ ಕಂತು ನಿಂತಿಲ್ಲ, ತುಮಕೂರು ಜಿಲ್ಲೆಯಲ್ಲಿ 40 ಕೋಟಿ ರೂ ಲಾಭಾಂಶವನ್ನು ಸಂಘದ ಮಹಿಳಾ ಸದಸ್ಯರಿಗೆ ಪುನಃ ಅವರಿಗೆ ನೀಡಿದ್ದೇವೆ ಎಂದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಾತನಾಡುತ್ತಾ, ಪೂಜ್ಯರು ನೂತನ ಹಾಲಿನ ಕೇಂದ್ರಗಳಿಗೆ, ದೇವಸ್ಥಾಗಳ ಜೀರ್ಣೋದ್ಧಾರಕ್ಕೆ,ಕೃಷಿ ಸಲಕರಣೆಗೆ, ವೃದ್ಧರಿಗೆ ಪ್ರತಿ ತಿಂಗಳು ಮಾಸಾಶನ, ಪಾಠ ಮಾಡಲು ಶಿಕ್ಷಕರ ನೇಮಕ, ಕೆರೆ ಅಭಿವೃದ್ಧಿ, ಶುದ್ಧಗಂಗಾ, ಕಲ್ಯಾಣಿ ಸ್ವಚ್ಛತೆ, ಸುಜ್ಞಾನ ನಿಧಿ, ವಾತ್ಸಲ್ಯ ಯೋಜನೆ, ಮದ್ಯವರ್ಜನ ಶಿಬಿರದ ಮೂಲಕ ಕುಡಿತ ಬಿಡಿಸುವುದು ಹೀಗೆ ನೂರಾರು ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿ ಕೆಲಸ ಮಾಡುತ್ತಿರುವುದು ನಿಮಗಾಗಿ ಎಂದರು.
ತಾಲ್ಲೂಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ರವರು ಧರ್ಮಸ್ಥಳ ಸಂಘ ಇರುವುದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ, ಎಲ್ಲ ಮಹಿಳೆಯರು ಸಂಘದ ಸದಸ್ಯರಾಗಿ ಸಾಲ ಪಡೆದು ಆರ್ಥಿಕವಾಗಿ ಮುಂದುವರೆಯಬೇಕು ಮತ್ತು ಹಣವನ್ನು ಉಳಿತಾಯವನ್ನು ಸಹ ಮಾಡಬೇಕು ರಾಷ್ಟ್ರದ ಜಿಡಿಪಿಗೆ ಕೊಡುಗೆ ನೀಡಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296