ಬೆಂಗಳೂರು: ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಪತ್ನಿಯೊಬ್ಬಳು, ಪತಿಯ ಸ್ನೇಹಿತನನ್ನೇ ‘ಅಣ್ಣ’ ಎಂದು ಕರೆದು ಈಗ ಆತನ ಜೊತೆಯೇ ಪರಾರಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಜಿಮ್ ಟ್ರೈನರ್ ಆಗಿರುವ ನಿತೇಶ್ ಎಂಬುವವರು ನಂದಿನಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದರು. ನಿತೇಶ್ ಅವರು ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ನವೀನ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಆಪ್ತ ಸ್ನೇಹಿತರಾಗಿದ್ದರು. ಮದುವೆಯ ನಂತರ ನವೀನ್, ನಿತೇಶ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದನು.
ಮನೆಯಲ್ಲೇ ವಾಸವಿದ್ದ ನವೀನ್ ಜೊತೆ ಪತ್ನಿ ನಂದಿನಿ ಅತಿಯಾದ ಸಲುಗೆ ಬೆಳೆಸಿಕೊಂಡಿದ್ದಳು. ಇದನ್ನು ಗಮನಿಸಿದ ಪತಿ ನಿತೇಶ್ ಹಲವಾರು ಬಾರಿ ಪತ್ನಿಗೆ ಬುದ್ಧಿವಾದ ಹೇಳಿದ್ದರು. ಅಷ್ಟೇ ಅಲ್ಲದೆ, ಈ ಕಾರಣಕ್ಕಾಗಿಯೇ ಅವರು ಮನೆ ಬದಲಾಯಿಸಿದ್ದರು. ಆದರೂ ನಂದಿನಿ ಮಾತ್ರ ನವೀನ್ ಜೊತೆಗಿನ ಸಂಪರ್ಕವನ್ನು ಮುಂದುವರಿಸಿದ್ದಳು.
ಘಟನೆ ನಡೆದ ದಿನದಂದು ತನಗೆ ಹೊಟ್ಟೆನೋವು ಇದೆ ಎಂದು ಕೆಲಸಕ್ಕೆ ರಜೆ ಹಾಕಿದ್ದ ನಂದಿನಿ, ಪತಿ ಇಲ್ಲದ ವೇಳೆ ನವೀನ್ ಜೊತೆ ನಾಪತ್ತೆಯಾಗಿದ್ದಾಳೆ. ಇದರಿಂದ ಕಂಗೆಟ್ಟ ಪತಿ ನಿತೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ, ಠಾಣೆಯಲ್ಲೂ ನಂದಿನಿ “ನಾನು ಪತಿಯ ಮನೆಗೆ ಹೋಗುವುದಿಲ್ಲ, ನವೀನ್ ಜೊತೆಯೇ ಇರುತ್ತೇನೆ” ಎಂದು ಹಠ ಹಿಡಿದಿದ್ದಾಳೆ. ಪತ್ನಿಯ ಈ ನಿರ್ಧಾರದಿಂದ ಪತಿ ನಿತೇಶ್ ಮತ್ತು ಪೊಲೀಸರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


