ಸರಗೂರು: ಮಕ್ಕಳ ಕಲಿಕೆಗೆ ನೆರವಾಗುವ ಹಾಗೂ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶಿಕ್ಷಣದ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಸಮಾಜ ಸೇವಕ ಯಶವಂತಪುರ ಶಿವಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ವತಿಯಿಂದ ನೋಟ್‌ಬುಕ್‌ಗಳು, ಅಗತ್ಯ ಕಲಿಕಾ ಸಾಮಗ್ರಿಗಳು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ವಿನ್ಯಾಸದ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಶವಂತಪುರ ಶಿವಲಿಂಗಯ್ಯ, “ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೊದಲ ಆದ್ಯತೆ ದೊರಕಬೇಕು ಎಂಬ ಧ್ಯೇಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನಂಜನಗೂಡು ತಾಲ್ಲೂಕಿನ ಡೋರನಕಟ್ಟೆ ಕಾಲೋನಿ, ವೆಂಕಟಗಿರಿ ಕಾಲೋನಿ ಹಾಗೂ ಚಿಲಕಹಳ್ಳಿ ಕಾಲೋನಿಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದ್ದು, ಮಹಿಳೆಯರಿಗೂ ಹೊಸ ಸೀರೆಗಳನ್ನು ವಿತರಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಗುಣಮಟ್ಟದ ಶಿಕ್ಷಣದಿಂದ ಖಾಸಗಿ ಶಾಲಾ ವ್ಯಾಮೋಹಕ್ಕೆ ಬ್ರೇಕ್:
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸ್ವಯಂಸೇವಕಿ ಮಂಗಳ ವಿಜೇಂದ್ರ ಮಾತನಾಡಿ, ಹಾದನೂರು ಸರ್ಕಾರಿ ಶಾಲೆಯ ಅಭಿವೃದ್ಧಿ, ಮಕ್ಕಳ ಶಿಸ್ತು ಹಾಗೂ ಶಿಕ್ಷಕರ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು. “ಸರ್ಕಾರಿ ಶಾಲೆಗಳು ಇದೇ ರೀತಿಯ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ವಾತಾವರಣವನ್ನು ರೂಪಿಸಿದರೆ ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ. ಕಡ್ಡಾಯ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿದಾಗ ಮಾತ್ರ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಅವರ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ದೊರೆತು, ಅವರು ಸಮಾಜದ ಆಸ್ತಿಯಾಗಬೇಕು ಎಂಬುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅನುರಾಧ ರಾವ್, ಭಾವನಾ ಶಾ, ಶಶಿಕಲಾ ಅರುಣ್, ಭುವನ ಕಶ್ಯಪ್, ರೇಣುಕಾ ಕೌಜಲಗಿ, ಸಹನಾ ಗೌಡ, ಕೃಷ್ಣ ಎಚ್.ಬಿ., ಕಾಂತರಾಜ್, ಇಂದಿರಾ ಈಶ್ವರ್, ಭರತ್ ಗೌಡ ಹಾಗೂ ಸ್ವಯಂಸೇವಕರಾದ ಮಂಗಳ, ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ, ಅತಿಥಿ ಶಿಕ್ಷಕರಾದ ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಸಿದ್ದರಾಜು, ಹೇಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ನಂಜಪ್ಪ, ಮಾಜಿ ಅಧ್ಯಕ್ಷ ಮಹೇಂದ್ರ, ರತ್ನಯ್ಯ ಮಳಲಿ, ಬಸವರಾಜು ಚಿಲಕಹಳ್ಳಿ, ರಾಜು ಸೇರಿದಂತೆ ಎಸ್ ಡಿಎಂಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
