ಬೆಂಗಳೂರು: ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿವೆ ಎಂದು ಆಘಾತ ವ್ಯಕ್ತಪಡಿಸಿರುವ ಸಚಿವ ಈಶ್ವರ್ ಖಂಡ್ರೆ(Ishwar Khandre )ಅವರು, ಈ ಎಲ್ಲಾ ಹುಲಿಗಳ ಸಾವಿನ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಸಚಿವರು, ಸಾವನ್ನಪ್ಪಿರುವ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸಾವನ್ನಪ್ಪಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜವಾಗಿ ಮೃತಪಟ್ಟ ಹುಲಿಗಳ ಸಾವಿಗೆ ಕಾರಣವೇನು? ಎಂಬ ಬಗ್ಗೆ ತನಿಖೆ ನಡೆದು ವರದಿ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೃತಪಟ್ಟ ಯಾವುದಾದರೂ ಹುಲಿಗಳ ಅಂಗಾಂಗ ಅಂದರೆ ಉಗುರು, ಹಲ್ಲು ಇತ್ಯಾದಿ ತೆಗೆಯಲಾಗಿತ್ತೆ? ಹುಲಿಗಳ ಹತ್ಯೆ ಆಗಿದ್ದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆಯೇ? ಎಷ್ಟು ಹುಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ? ಎಂಬ ವಿವರವನ್ನೂ ಕೇಳಿದ್ದಾರೆ.
ಈವರೆಗೆ ಹುಲಿ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಎಷ್ಟು ಪ್ರಕರಣಗಳು ತನಿಖಾ ಹಂತದಲ್ಲಿದೆ. ಯಾವ ಕಾರಣಕ್ಕೆ ತನಿಖೆ ವಿಳಂಬವಾಗಿದೆ ಎಂಬ ಸಂಪೂರ್ಣ ವಿವರವನ್ನು 10 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC