ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲಿಸಿದರು.
ಬೊಮ್ಮನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಗಾಳಿಗೆ ಟೆನ್ಸಲ್ ರೂಫ್ ಬಿದ್ದ ಪ್ರಕರಣ ಸಂಬಂಧ ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಗುತ್ತಿಗೆದಾರರಿಂದಲೇ ದುರಸ್ತಿ ಕಾರ್ಯವನ್ನು ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೇಗವಾಗಿ ಗಾಳಿ ಬಂದ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರೇಕ್ಷರ ಗ್ಯಾಲರಿಗೆ ಅಳವಡಿಸಿದ್ದ ಟೆನ್ಸಲ್ ರೂಫ್ ಬಿದ್ದಿದೆ. ಇದರ ಜೊತೆಗೆ ಇನ್ನೂ ಬಾಕಿಯಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಇದೇ ವೇಳೆ ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಬಿಡಿಎ ಕಾಂಪ್ಲೆಕ್ಸ್ ಬ್ಲಾಕ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, 64 ಪೌರಕಾರ್ಮಿಕರಲ್ಲಿ 54 ಮಂದಿ ಮಾತ್ರ ಹಾಜರಿದ್ದರು. ಈ ಪೈಕಿ ನಿರಂತರವಾಗಿ ಬಾರದೇ ಇರುವವರನ್ನು ಬೇರೆಡೆ ಸ್ಥಳಾಂತರಿಸಲು ಸೂಚನೆ ನೀಡಿದರು.ಹೆಚ್ ಎಸ್ ಆರ್ ಲೇಔಟ್ 6ನೇ ಸೆಕ್ಟರ್ ನ, 3ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ ಪ್ರದೇಶವು ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆಗಾದಲ್ಲಿ ಜಲಾವೃತವಾಗುತ್ತದೆ. ಈ ಸಂಬಂಧ ಹೊಸದಾಗಿ 286 ಮೀಟಿರ್ ಸೈಡ್ ಡ್ರೈನ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಮಖ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಮಳೆಗಾಲದ ವೇಳೆ ಈ ಭಾಗದಲ್ಲಿ ಸಂಪೂರ್ಣವಾಗಿ ಜಲಾವೃತವಾಗುವ ಸಮಸ್ಯೆ ಬಗೆಹರಿಯಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 6ನೇ ಮುಖ್ಯ ರಸ್ತೆಯ ಬಳಿ 1.5 ಮೀಟರ್ ಎತ್ತರವಿರುವ ಸೇತುವೆಯನ್ನು, 3.5 ಮೀಟರ್ ಎತ್ತರ(15 ಮೀಟರ್ ಉದ್ದ, 18 ಮೀಟರ್ ಅಗಲ)ಕ್ಕೆ ಎತ್ತರಿಸಲಾಗಿದ್ದು, ಇದಿರಂದ ಪ್ರಮುಖ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಿದೆ.ಇದಲ್ಲದೆ ಹೆಚ್.ಎಸ್.ಆರ್ ಲೇಔಟ್ ನಲ್ಲಿ ನೀರು ನಿಲ್ಲದೇ ಇರುವ ಹಾಗೆ ಮಾಡಲು ಪ್ರಮುಖ ರಾಜಕಾಲುವೆಯಲ್ಲಿ 600 ಮೀಟರ್ ಉದ್ದದ ಪರ್ಯಾಯ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಜೋರು ಮಳೆಯಾದಾಗ ಬ್ಯಾಕ್ ವಾಟರ್ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಅನುಗ್ರಹ ಲೇಔಟ್ ಕೆಳಭಾಗದಲ್ಲಿರುವ ಕಾರಣ ಪ್ರತಿ ಬಾರಿ ಮಳೆಯಾದ ವೇಳೆ ಫೇಸ್-1 ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈ ಪೈಕಿ ಮಳೆಗಾಲ್ಲಿ 45ಹೆಚ್.ಪಿ ಯಂತ್ರವನ್ನು ಸ್ಥಳದಲ್ಲೇ ಇಡಲಾಗಿದೆ. ಮಳೆ ಬಿದ್ದ ಕೂಡಲೆ ಪಂಪ್ ಮಾಡಿ ಮಡಿವಾಳ ಕೆರೆಗೆ ಸಂಪರ್ಕವಿರುವ ಕಾಲುವೆಗೆ ಬಿಡಲಾಗುತ್ತದೆ. ಈ ಭಾಗದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಲ್ವರ್ಟ್ ನಿರ್ಮಿಸಿ ನೀರು ನಿಲ್ಲದಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೊಟ್ಟಿಗೆರೆ ವಾರ್ಡ್ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಸುವಿಧಾ ಕ್ಯಾಬಿನ್, ಟ್ರಾನ್ಸ್ ಫರ್ ಸ್ಟೇಷನ್ ಪರಿವೀಕ್ಷಣೆ ನಡೆಸಿ, ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ನಲ್ಲಿ ವಿಶ್ರಾಂತಿ ಪಡೆಯಲು ಮೊದಲ ಹಂತದಲ್ಲಿ 227 ಸ್ಥಳಗಳಲ್ಲಿ ಸುವಿಧಾ ಕ್ಯಾಬ್ ಗಳನ್ನು ಅಳವಡಿಸಲಾಗುತ್ತಿದ್ದು, ಇನ್ನೂ ಬೇರೆಡೆ ಗುರುತಿಸಿರುವ ಸ್ಥಳಗಳಲ್ಲಿಯೂ ತ್ವರಿತವಾಗಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ತಿಳಿಸಿದರು.ಬಳಿಕ ವೀವರ್ಸ್ ಕಾಲೋನಿಯಲ್ಲಿ ರಾಜಕಾಲುವೆ ಪರಿಶೀಲನೆ ನಡೆಸಿ, ಕಚ್ಚಾ ಡ್ರೈನ್ ಅನ್ನು ಕೂಡಲೆ ದುರಸ್ತಿಪಡಿಸಿ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಶಾಸಕರಾದ ಸತೀಶ್ ರೆಡ್ಡಿ, ಕೃಷ್ಣಪ್ಪ, ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ಮುಖ್ಯ ಇಂಜಿನಿಯರ್ ಗಳಾದ ಶಶಿಕುಮಾರ್, ಸುಗಣಾ, ವಿಜಯ್ ಕುಮಾರ್ ಹರಿದಾಸ್, ಬಸವರಾಜ್ ಕಬಾಡೆ, ಕಾರ್ಯಪಾಲ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


