ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಭೀಕರ ಅವಘಡವೊಂದು ಸಂಭವಿಸಿದ್ದು, ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿದು ಬಿದ್ದು ನಾಲ್ವರು ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆ ಗಾಯಗೊಂಡಿದ್ದಾರೆ.
ಮಕ್ಕಳು ಅಂಗನವಾಡಿ ಕೇಂದ್ರದ ಒಳಗೆ ಕುಳಿತು ಎಂದಿನಂತೆ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ಛಾವಣಿಯ ಪ್ಲಾಸ್ಟರ್ ಕಳಚಿ ಬಿದ್ದಿದೆ. ಘಟನೆಯಲ್ಲಿ ಶಾನ್ವಿ, ರಿತಿಕಾ, ಜೀವಿಕಾ ಮತ್ತು ದಿಯಾ ಎಂಬ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ ಗಾಯಗೊಂಡಿದ್ದಾರೆ. ಓರ್ವ ಮಗುವನ್ನು ಒಳರೋಗಿ ವಿಭಾಗಕ್ಕೆ (IPD) ದಾಖಲಿಸಲಾಗಿದ್ದು, ಗಾಯಾಳುಗಳನ್ನೆಲ್ಲಾ ತಕ್ಷಣವೇ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಅಂಗನವಾಡಿ ಕಟ್ಟಡವು ಸುಮಾರು 25 ವರ್ಷಗಳಷ್ಟು ಹಳೆಯದಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಹಳೆಯ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು (CDPO) ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನವೀನ್ ವೈ. ಭಟ್ ಅವರು, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲಿಸಿ ತಕ್ಷಣವೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
