ತುಮಕೂರು: ಬೃಹತ್ ಕೈಗಾರಿಕಾ ಪ್ರದೇಶ, ರೈಲ್ವೆ, ಹೆದ್ದಾರಿ ಸಂಪರ್ಕ ಜಾಲ ಹೊಂದಿರುವ ತುಮಕೂರು ಜಿಲ್ಲೆಯಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕೆಂದು ಶೀಘ್ರ ಮುಖ್ಯಮಂತ್ರಿಗಳನ್ನು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಸ್ವಾತಂತ್ರ್ಯ ದಿನಾಚರಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ಜಿಲ್ಲೆಗಳ ಪ್ರವೇಶದ್ವಾರವಾಗಿ ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಿರುವ ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಸಂಬಂಧ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದು, ಸಿಎಂ ಭೇಟಿಯಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗುವುದು ಎಂದರು.
ತುಮಕೂರಿನವರೆಗೆ ಮೆಟ್ರೋ ಸಂಬಂಧ ಡಿಪಿಆರ್ ಸಂಪೂರ್ಣವಾಗಿದ್ದು, ಪಿಪಿಪಿ ಮಾಡೆಲ್‌ನಲ್ಲಿ ಅನುಷ್ಠಾನಗೊಳಿಸಲಾಗುವುದು. ಹೆದ್ದಾರಿ ಮೀಡಿಯೇಷನ್ ಮೇಲೆ ಮೆಟ್ರೋ ಹಳೆಯ ಪಿಲ್ಲರ್ ಹಳಿ ಬರಬೇಕಿರುವುದರಿಂದ ಕೇಂದ್ರದ ಹೆದ್ದಾರಿ ಪ್ರಾಧಿಕಾರ ದ ಅನುಮತಿ ಅಗತ್ಯ. 20 ಸಾವಿರ ಕೋಟಿಗೂ ಅಧಿಕ ಹಣ ಮೆಟ್ರೋಗೆ ವೆಚ್ಚರಾಗಿದ್ದು, ಬಂಡವಾಳ ಹೂಡುವ ಸಂಸ್ಥೆಗಳಿಗೆ ಆಯಕಟ್ಟಿನ ಕಡೆ ವಾಣಿಜ್ಯ ಬಳಕೆಗೆ ಅವಕಾಶ ಮಾಡಿಕೊಟ್ಟು, ಆ ಮೂಲಕ ಆದಾಯ ದೊರೆಯುವಂತೆ ಮಾಡಲಾಗುವುದು ಎಂದರು.
ಜೇನ್ ಜಿ ಪೀಳಿಗೆ ಉತ್ತಮ ಭವಿಷ್ಯಕ್ಕಾಗಿ ಸರ್ಕಾರ ಕ್ರಮ
ನಮ್ಮ ಸರ್ಕಾರ ಜಾರಿಗೊಳಿಸಿದ ಪಂಚಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲಿ ಮೆಚ್ಚುಗೆಗೊಳಿಸುವ ಜೊತೆಗೆ ವಿಶ್ವ ಮಟ್ಟದ ಸಂಸ್ಥೆಗಳ ಪ್ರಶಂಸೆಗೆ ಪಾತ್ರವಾಗಿದೆ. ಡಿಸಿಎಂ ಅವರು ಸಿಎಂ ಆದ ಬಳಿಕ ಯುವಜನರನ್ನು ಕೇಂದ್ರೀಕರಿಸಿ ಅವರಲ್ಲಿ ಭವಿಷ್ಯತ್ ಪ್ರಗತಿ, ನಾಯಕತ್ವ, ಸಹಭಾಗಿತ್ವದ ಗುಣ ಬೆಳೆಸಿಕೊಳ್ಳಲು 10 ಸಾವಿರ ಭಾರತ್ ಜೋಡೋ ಸಂಘ ನೋಂದಣಿಗೆ ಚಾಲನೆ ಕೊಟ್ಟಿದ್ದು, ನೋಂದಣಿ ಆರಂಭಿಸಿದ ಒಂದೇ ದಿನದಲ್ಲಿ 50 ಸಾವಿರ ಅರ್ಜಿಗಳು ಬಂದಿವೆ. 18 ರಿಂದ 35 ವರ್ಷ ವಯೋಮಾನದ ಜೇನ್ ಜಿ ಜನರೇಷನ್‌ನವರು ಧರ್ಮ, ಜಾತಿ, ಪ್ರಾದೇಶಿಕತೆಯನ್ನು ಮೀರಿ ಉತ್ತಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಇಂತಹ ಯುವಜನರ ಜೀವನ ಭದ್ರತೆಗಾಗಿ ನಮ್ಮ ಸರ್ಕಾರ ಕಾಳಜಿ ವಹಿಸಿ 73 ಸಾವಿರ ಹುದ್ದೆ ಭರ್ತಿಗೆ ಕ್ರಮವಹಿಸಿದೆ ಎಂದರು.
ಜಿಲ್ಲಾ ಗಣಿಬಾಧಿತ ಪ್ರದೇಶಗಳ ಪರಿಹಾರ ನಿಧಿಯಡಿ ನಿವೃತ್ತ ನ್ಯಾಯಾಧೀಶರ ಸಮಿತಿ ಅನುಮೋದನೆಯೊಂದಿಗೆ 132 ಕೋಟಿ ಅನುದಾನ ಪಡೆದು, ಸುಸಜ್ಜಿತ ಜಿಲ್ಲಾಸ್ಪತ್ರೆ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲಿಯವರೆಗೆ ಟ್ರೌಮಾ ಕೇರ್ ಸೆಂಟರ್‌ನಲ್ಲಿ ರೋಗಿಗಳಿಗೆ ಆರೈಕೆ ಮಾಡಲಾಗುತ್ತಿದ್ದು, ಹೊಸ ಆಸ್ಪತ್ರೆ ಕಟ್ಟಡದೊಂದಿಗೆ ಸರ್ಕಾರಿ ಮೆಡಿಕಲ್ ಕಾಲೇಜನ್ನು ಆರಂಭಿಸಲು ಬಜೆಟ್ ಘೋಷಣೆ ಮಾಡುವಂತೆ ಸಿಎಂಗೆ ಮನವಿ ಮಾಡಲಾಗುವುದು.
— ಡಾ.ಜಿ.ಪರಮೇಶ್ವರ್, ಡಿಸಿಎಂ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೂ 12.50 ಕ್ಯೂಸೆಕ್ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತುಮಕೂರಿಗೆ ಹೇಮಾವತಿ ನೀರು ಹರಿಸುವ ಸಂಬಂಧ ಶೀಘ್ರ ಐಸಿಸಿ ಸಮಿತಿ ಸಭೆ ಕರೆಯಲಾಗುವುದು. ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ.20ಕ್ಕೆ ಕುಸಿದಿರುವುದನ್ನು ಪ್ರತ್ಯಕ್ಷ ಕಂಡಿದ್ದೇನೆ. ಇಡೀ ರಾಜ್ಯದ ಬೆಳೆ ನಷ್ಟದ ವಾಸ್ತವಾಂಶದ ಸಮೀಕ್ಷಾ ವರದಿ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಪರಿಹಾರದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರೈತರಿಂದ ರಾಗಿ ಖರೀದಿ ಬಾಬು ಬಾಕಿಯಿರುವ ಸಂಗತಿ ಸರ್ಕಾರದ ಗಮನಕ್ಕೂ ಇದ್ದು ಶೀಘ್ರ ಬಿಡುಗಡೆಗೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದ ಅವರು, ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕ್ರಮ ನಿಯಮಾನುಸಾರವೇ ಆಗಿರುತ್ತದೆ. ರೈತರನ್ನು ಅನಗತ್ಯವಾಗಿ ಒಕ್ಕಲೆಬ್ಬಿಸುವ ಯತ್ನ ಮಾಡುವುದಿಲ್ಲ. ಅಕ್ರಮ ಸಾಗುವಳಿದಾರರ ಮೇಲೆ ಕ್ರಮವಾಗುತ್ತದೆ ಎಂದರು.
ತುಮಕೂರು ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಎಲ್ ಅಂಡ್ ಟಿ ಕಂಪನಿಯಿಂದ ಇಂಡಸ್ಟ್ರಿಯಲ್ ಟೌನ್‌ಶಿಪ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಐಟಿ ಸಾಫ್ಟ್‌ವೇರ್ ಕಂಪನಿಗಳು ಡೇಟಾ ಸೆಂಟರ್ ತಲೆ ಎತ್ತಲಿದೆ ಹಾಗೂ 25 ಸಾವಿರ ಉದ್ಯೋಗಾವಕಾಶಗಳು ಲಭ್ಯವಾಗುವ ಗ್ರೀನ್ ಹೈಡ್ರೋಜನ್ ಸಂಸ್ಥೆ ಘಟಕವೂ ಬರಲಿದೆ ಎಂದು ಮಾಹಿತಿ ನೀಡಿದರು.
ಖೇಲೋ ಇಂಡಿಯಾ ಆಯೋಜನೆ: ತುಮಕೂರು ಕ್ರೀಡಾ ಹಬ್ ಆಗಿ ಬೆಳೆಯಬೇಕೆಂದು ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಪಂದ್ಯಾವಳಿ ಆತಿಥ್ಯ ವಹಿಸುವ ಅವಕಾಶವನ್ನು ತುಮಕೂರು ನೀಡಿದ್ದು, ಖೇಲೋ ಇಂಡಿಯಾ ವಾರ್ಷಿಕ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸುವಂತೆ ಪತ್ರ ಬರೆಯಲಾಗಿದೆ. ಕೆಎಸ್‌ಸಿಎ ನೂತನ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಶೀಘ್ರ ಚಾಲನೆ ಕೊಡುವಂತೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆಗೆ ಸಮಾಲೋಚಿಸಿರುವುದಾಗಿ ಕ್ರೀಡಾ ಸಚಿವರೂ ಆದ ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಕುಡಿಯುವ ನೀರು, ಚರಂಡಿ, ರಸ್ತೆ ವ್ಯವಸ್ಥೆಗೆ ವಿಶೇಷ ಅನುದಾನ ಕೋರಲಾಗಿದೆ ಎಂದ ಡಿಸಿಎಂ ಅವರು ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕೋರ್ಟ್‌ಆದೇಶ ಪಾಲನೆಯ ಜೊತೆಗೆ ಪಾದಚಾರಿಗಳು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರ ವಿರುದ್ಧದ ಕ್ರಮವಾಗಿದೆ. ಆರಂಭದಲ್ಲಿ ವ್ಯಾಪಾರಿಗಳಿಗೆ ಸ್ವಲ್ಪ ತೊಂದರೆಯಾಗಿದೆ. ಸೂಕ್ತ ಪರ್ಯಾಯ ವ್ಯವಸ್ಥೆ ಹಂತಹಂತವಾಗಿ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್, ಕಾಡುಗೊಲ್ಲ ನಿಗಮದ ಅಧ್ಯಕ್ಷ ಮಹೇಶ್ ಪಾಲೇಗೌಡ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಚಂದ್ರಶೇಖರಗೌಡ, ಡಿಸಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಎಡಿಸಿ ತಿಪ್ಪೇಸ್ವಾಮಿ, ಎಸಿ ನಫೀಜಾ ಬಾನು, ತಹಸೀಲ್ದಾರ್ ರಾಜೇಶ್ವರಿ, ಸಿಂಡಿಕೇಟ್ ಸದಸ್ಯ ಫರ್ಹಾನ್ ಬೇಗ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
