ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾರ್ವಜನಿಕರು ಮೃತಪಟ್ಟ ಘಟನೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನಿಖೆಯ ಪಾರದರ್ಶಕತೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹಿಂದೆ ಹಲವು ಅನುಮಾನಗಳಿದ್ದು, ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
‘ಅವರೇನು ವೀರಪ್ಪನ್ ರೇಂಜ್ನವರಾ?’: ಅರಣ್ಯ ಪ್ರದೇಶಕ್ಕೆ ತೆರಳಿದವರು ಅಥವಾ ಬೇಟೆಗೆ ಬಂದವರು ವೀರಪ್ಪನ್ ಮಟ್ಟದ ಭೀಕರ ಅಪರಾಧಿಗಳೇನು ಎಂದು ಪ್ರಶ್ನಿಸಿದ ಹೆಚ್ಡಿಕೆ, ಅವರನ್ನು ಜೀವಂತವಾಗಿ ಬಂಧಿಸಲು ಸಾಧ್ಯವಿರಲಿಲ್ಲವೇ? ಇಲಾಖೆಯ ನಿಯಮಾವಳಿಗಳ ಪ್ರಕಾರ ಅಗತ್ಯವಿದ್ದರೆ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಬಹುದಿತ್ತು ಎಂದು ಕಿಡಿಕಾರಿದರು.
ಒಂದೇ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡು, ಮತ್ತೊಬ್ಬ ವ್ಯಕ್ತಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದು ಅತ್ಯಂತ ಗಂಭೀರ ಹಾಗೂ ಕಳವಳಕಾರಿ ವಿಚಾರ ಎಂದರು.
ಆತ್ಮರಕ್ಷಣೆಗಾಗಿ ದಾಳಿ ನಡೆಸಿದ್ದಾಗಿ ಅರಣ್ಯ ಸಿಬ್ಬಂದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಘಟನೆಯಲ್ಲಿ ಭಾಗಿಯಾದ ಯಾವೊಬ್ಬ ಅರಣ್ಯ ಸಿಬ್ಬಂದಿಗೂ ಸಣ್ಣ ಗಾಯವೂ ಆಗದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ಘಟನೆಯ ನೈಜ ಸತ್ಯಾಸತ್ಯತೆ ಹೊರಬರಲು ಸೂಕ್ತ ತನಿಖೆ ಅಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
