ರಾಜ್ಯದಲ್ಲಿ ಉದ್ಯಮಸ್ನೇಹಿ, ಕೈಗಾರಿಕಾ ಸ್ನೇಹಿ ವಾತಾವರಣ ಇದ್ದು, ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತ ಆಹ್ವಾನ ನೀಡಿದ್ದಾರೆ.
ಬೆಂಗಳೂರು-ತುಮಕೂರು ರಸ್ತೆಯ ನೆಲಮಂಗಲದ ಮಾದಾವರ ಬಳಿ ಇರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿಂದು ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸೋಕಾನ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡುವ ಉದ್ಯಮಿಗಳಿಗೆ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲಿದೆ ಎಂದರು.
ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಉದ್ಯಮಸ್ನೇಹಿ ವಾತಾವರಣವಿದೆ. ಹಾಗಾಗಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಅವರು ಆಹ್ವಾನ ನೀಡಿದರು.
ಉದ್ಯಮಿಗಳಿಗಾಗಿ ಸರ್ಕಾರದ ರಿಯಾಯ್ತಿ ಸೌಲಭ್ಯಗಳು, ಸವಲತ್ತುಗಳು, ಕೌಶಲ್ಯಯುತ ಉದ್ಯೋಗಿಗಳ ಲಭ್ಯತೆ ಎಲ್ಲವನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ತಮ ವಾತಾವರಣ ಇದೆ ಎಂದರು.
ಕರ್ನಾಟಕ ಮೊದಲಿನಿಂದಲೂ ಬಂಡವಾಳ ಹೂಡಿಕೆದಾರರಿಗೆ ಉತ್ತಮ ನೆಲೆಯಾಗಿದೆ. ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂಡವಾಳಗಾರರು ಹೂಡಿಕೆಗಾಗಿ ಬರುತ್ತಿದ್ದಾರೆ ಎಂದರು.
ರಾಜ್ಯಕ್ಕೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ರಾಜ್ಯ ಸರ್ಕಾರ ಬರುವ ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆ ಜಾಗತೀಕ ಸಮಾವೇಶವನ್ನು ಆಯೋಜಿಸಿದೆ. ಈಗಾಗಲೇ ಈ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ದೆಹಲಿ, ಮುಂಬೈಗಳಲ್ಲಿ ವಿವಿಧ ದೇಶಗಳ ರಾಯಭಾರಿಗಳು, ಉದ್ಯಮಿಗಳ ಜತೆ ಸಭೆಯನ್ನು ನಡೆಸಲಾಗಿದೆ ಎಂದು ಹೇಳಿದರು.
ಶಬ್ದ ಮಾಪನ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ ಮಾಪನ ಬಳಕೆಗೆ ಹೊಸ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಶಬ್ದ ಮಾಪನವನ್ನು ಅಳೆಯುವ ಸೌಂಡ್ ಮಾನಟರಿಂಗ್ ಮೀಟರ್‌ನ್ನು ಅಳವಡಿಕೆ ಮಾಡಿತ್ತು. ಪೊಲೀಸರ ಸೂಚನೆ ಮೇರೆಗೆ ಈ ಸೌಂಡ್ ಮಾನಟರಿಂಗ್ ಮೀಟರ್‌ನ್ನು ಅಳವಡಿಕೆ ಮಾಡಿ ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಪ್ರಕಾರ ಶಬ್ದದ ಬಳಕೆಯನ್ನು ಮಿತಿಗೊಳಿಸಿರುವುದನ್ನು ಪರೀಕ್ಷಿಸಲಾಯಿತು.
ವಾಣಿಜ್ಯ ಪ್ರದೇಶದಲ್ಲಿ ಶಬ್ದದ ಮಿತಿಯನ್ನು ರಾಜ್ಯ ಸರ್ಕಾರ 65 ಡೆಸಿಬಲ್‌ಗೆ ಮಿತಿಗೊಳಿಸಿದೆ. ಕಾರ್ಯಕ್ರಮದಲ್ಲಿ ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್, ಎಕ್ಸೋಕಾನ್ ಅಧ್ಯಕ್ಷ ದೀಪಕ್ ಶೆಟ್ಟಿ, ಸಹ ಅಧ್ಯಕ್ಷ ಟಿ. ಕೃಷ್ಣನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5