ಸರಣಿ ಮೊಬೈಲ್ ಸುಲಿಗೆ ಮಾಡಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 78.84 ಲಕ್ಷ ರೂ. ಮೌಲ್ಯದ 512 ಸ್ಮಾರ್ಟ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾದರಾಯನಪುರದ ನಿವಾಸಿ ಅಜ್ಮಲ್ ಪಾಷಾ ಮತ್ತು ಶಿವಾಜಿನಗರದ ನಿವಾಸಿ ಇಜಾಜ್ ಬಂಧಿತ ಆರೋಪಿಗಳು.
ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮೊಬೈಲ್ ಫೋನ್ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು 7ರಿಂದ 8 ಜನರ ತಂಡದೊಂದಿಗೆ ಸೇರಿಕೊಂಡು ಸುಲಿಗೆ ಮಾಡುತ್ತಿದ್ದರು. ನಗರದಲ್ಲಿ ಮೊಬೈಲ್ ಫೋನ್‍ಗಳನ್ನು ಸುಲಿಗೆ ಮತ್ತು ಕಳವು ಮಾಡಿ ನಂತರ ಆ ಮೊಬೈಲ್‍ಗಳನ್ನು ಮುಂಬೈ, ಹೈದರಾಬಾದ್ ಮತ್ತು ದೆಹಲಿಯಲ್ಲಿರುವ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು.
ಈ ಆರೋಪಿಗಳ ವಿರುದ್ಧ ಈ ಹಿಂದೆ ಚಾಮರಾಜಪೇಟೆ, ಉಪ್ಪಾರಪೇಟೆ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ವರ್ತೂರು ಹಾಗೂ ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ಸುಲಿಗೆ ಮತ್ತು ಕಳವು ಪ್ರಕರಣ ದಾಖಲಾಗಿದ್ದು, ಆ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುತ್ತಾರೆ.
ಆರೋಪಿಗಳು ಮೊಬೈಲ್‍ಗಳನ್ನು ತನ್ನ ಸಹಚರರ ಮೂಲಕ ಕಳವು ಮಾಡಿಸಿ ಆ ಮೊಬೈಲ್‍ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಬೆಂಗಳೂರಿನಲ್ಲಿಯೇ ಮಾರಾಟ ಮಾಡಿದರೆ ಸಿಕ್ಕಿ ಹಾಕಿಕೊಳ್ಳುವ ಭೀತಿಯಿಂದ ಹೊರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ರೂಢಿಸಿಕೊಂಡಿದ್ದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಹೊರ ರಾಜ್ಯದ ಹೈದರಾಬಾದ್, ಮುಂಬೈ ಮುಂತಾದ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ 78.84 ಲಕ್ಷ ರೂ. ಮೌಲ್ಯದ ಒಟ್ಟು 512 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz