ಚೆನ್ನೈ: ಬೆಂಗಳೂರಿನ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ಗೋಡೌನ್ ಬೆಂಕಿ ಅವಘಡದ ಘಟನೆ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಇಂತದ್ದೇ ದುರಂತ ಸಂಭವಿಸಿದೆ. ತಮಿಳುನಾಡಿನ ಅರಿಯಲೂರು ಜಿಲ್ಲೆಯ ವೆಟ್ರಿಯೂರ್ ವೀರಗಾಲೂರಿನಲ್ಲಿ ಖಾಸಗಿ ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ಕಾರ್ಮಿಕರು ಪಟಾಕಿ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೆಳಿಗ್ಗೆ 9:30ರ ಸುಮಾರಿಗೆ ಸ್ಫೋಟಗೊಂಡು 10 ಜನ ಕಾರ್ಮಿಕರು ಸಜೀವ ದಹನ ಹೊಂದಿದ್ದಾರೆ. ಇಬ್ಬರ ಮೃತದೇಹಗಳು ಮಾತ್ರ ಪತ್ತೆಯಾಗಿವೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ದುರಂತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.


