ನಮ್ಮತುಮಕೂರು: ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸುದ್ದೇಕುಂಟೆ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ತುಮಕೂರು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ..-ಎಸ್.ಸಿ.(ಫೋಕ್ಸೋ)ವು ಕಠಿಣ ಶಿಕ್ಷೆ ವಿಧಿಸಿದೆ.
ದಿನಾಂಕ 12—08—2021ರಂದು 13 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿ ತನ್ನ ಅಜ್ಜಿಯ ಜೊತೆಗೆ ಇದ್ದ ವೇಳೆ ಅದೇ ಗ್ರಾಮದ ವಾಸಿ 40 ವರ್ಷ ವಯಸ್ಸಿನ ಮಂಜುಳಾ(1ನೇ ಆರೋಪಿ) ನೊಂದ ಬಾಲಕಿಯ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಎಲ್ ಐಸಿಗೆ ಫೋಟೋ ತೆಗೆದು ವಾಟ್ಸಾಪ್ ಮಾಡಿಕೊಡು ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ಬಳಿನ ಮನೆಯ ಮೇಲಿನ ರೂಮಿಗೆ ಕರೆದೊಯ್ದು ರೂಮಿಗೆ ತಳ್ಳಿದ್ದಾಳೆ.
ಈ ವೇಳೆ ರೂಮಿನ ಬಾಗಿಲಿನ ಹಿಂದೆ ಅಡಗಿಕೊಂಡಿದ್ದ 2ನೇ ಆರೋಪಿ ಬಲರಾಮ ಹಾಗೂ ಮೂರನೇ ಆರೋಪಿ ಸಿದ್ದಪ್ಪ ಹೊರ ಬಂದಿದ್ದು, ಮಂಜುಳಾ ಹಾಗೂ ಸಿದ್ದಪ್ಪ ಸೇರಿ ಬಾಲಕಿಯನ್ನು ವಿವಸ್ತ್ರಗೊಳಿಸಿ ಕೈ ಹಾಗೂ ಬಾಯಿಗೆ ಟೇಪ್ ನ್ನು ಕಟ್ಟಿದ್ದಾರೆ. 2ನೇ ಆರೋಪಿ ಬಲರಾಮ(31) ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಳಿಕ ಈ ವಿಚಾರ ಯಾರಿಗಾದರೂ ತಿಳಿಸಿದರೆ, ಸಾಯಿಸುವುದಾಗಿ ನೊಂದ ಬಾಲಕಿಯನ್ನು ಬೆದರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಕೊಡಗೇನಹಳ್ಳಿ ಪೊಲೀಸರು ಆರೋಫಿಗಳ ವಿರುದ್ಧ ಪೋಕ್ಟೋ ಆಕ್ಟ್ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖಾಧಿಕಾರಿ ಡಿವೈಎಸ್ ಪಿ ರಾಮಕೃಷ್ಣ ಅವರು ಘನ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿಯನ್ನು ಸಲ್ಲಿಸಿದರು.
ವಿಚಾರಣೆ ವೇಳೆ, ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯವು, 1ನೇ ಅಪರಾಧಿ ಮಂಜುಳ ಮತ್ತು ಮೂರನೇ ಅಪರಾಧಿ ಸಿದ್ಧಪ್ಪನಿಗೆ 20 ವರ್ಷಗಳ ಕಾಲ ಶಿಕ್ಷೆ ತಲಾ 1.30 ಲಕ್ಷ ದಂಡ ವಿಧಿಸಿದ್ದು, 2ನೇ ಅಪರಾಧಿ ಬಲರಾಮನಿಗೆ 30 ವರ್ಷಗಳ ಶಿಕ್ಷೆ ಹಾಗೂ 1.45 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 4 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶ ನೀಡಿದರು. ಅಭಿಯೋಜನೆಯ ಪರವಾಗಿ ತುಮಕೂರು ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರುಮನೆ


