ಬೆಂಗಳೂರು: ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ‘ಪರ್ಸಂಟೇಜ್ ಪಟಾಲಂ’ ಈಗ ಕಸಕ್ಕೂ ಬಾಯಿ ಹಾಕಿದೆ! ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ!! ಅದರ ಒಳಗುಟ್ಟು ರಟ್ಟಾಗಿದೆ!! ‘ಬ್ರ್ಯಾಂಡ್’ ಹೆಸರಿನಲ್ಲಿ ಕೊಳ್ಳೆ ಹೊಡೆಯಲು, ಕಂಡ ಕಂಡ ಕಡೆ ಬೇಲಿ ಹಾಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಕುಟುಕಿರುವ ಹೆಚ್ಡಿಕೆ, ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್ʼ ಗಳನ್ನು ಸೃಷ್ಟಿ ಮಾಡುತ್ತಿರುವುದು ದಿಟ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಮಂಡೂರು ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದ ಜನ ಈ ನರಕದಲ್ಲೇ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರದ ಜನರೂ ಕಸದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳನ್ನು ʼಕಸದ ತೊಟ್ಟಿʼ ಗಳನ್ನಾಗಿ ಮಾಡಿ ʼಸಾವಿನ ದಿಬ್ಬʼ ಗಳನ್ನು ನಿರ್ಮಿಸಲು ʼಬ್ರ್ಯಾಂಡ್ ಬೆಂಗಳೂರುʼ ಹೆಸರಿನಲ್ಲಿ ಹುನ್ನಾರ ಹೂಡಲಾಗಿದೆ. ಇದು ಘೊರ ಅಕ್ಷಮ್ಯ ಹಾಗೂ ರಾಜಧಾನಿಯ ಆಸುಪಾಸಿನಲ್ಲಿ ಈಗಾಗಲೇ ಕೆಟ್ಟಿರುವ ಪರಿಸರವನ್ನು ಮತ್ತಷ್ಟು ಹಾಳು ಮಾಡುವ ದುಷ್ಟ ತಂತ್ರವಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಮೃದ್ಧವಾಗಿವೆ. ಅಲ್ಲಿನ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಿ, ಜನಜೀವನವನ್ನು ಸರ್ವನಾಶ ಮಾಡುವುದು ಒಂದೆಡೆಯಾದರೆ; ಹೊಸ ಡಂಪಿಂಗ್ ಯಾರ್ಡ್ʼ ಗಳ ಮೂಲಕ ಕೋಟಿಗಟ್ಟಲೇ ಹಣವನ್ನು ಜೇಬಿಗೆ ಡಂಪ್ ಮಾಡಿಕೊಳ್ಳುವ ಖತರ್ನಾಕ್ ಐಡಿಯಾ ಇನ್ನೊಂದೆಡೆ ಅಡಗಿದೆ!
ಜಗತ್ತಿನಲ್ಲಿಯೇ ಉತ್ಕೃಷ್ಟ ಮಾವು, ರೇಷ್ಮೆ, ಹಣ್ಣು, ತರಕಾರಿ ಬೆಳೆಯುತ್ತಿರುವ ರಾಮನಗರ, ಬಿಡದಿ ಬಳಿ ನೂರು ಎಕರೆ ಪ್ರದೇಶದಲ್ಲಿ ಕಸ ಸುರಿಯಲು ಉಪ ಮುಖ್ಯಮಂತ್ರಿಗಳ ದೊಡ್ಡ ಹುನ್ನಾರದ ಒಳ ಉದ್ದೇಶ ಸ್ಪಷ್ಟ. ಈಗಾಗಲೇ ವೃಷಭಾವತಿ ಸೇರಿ ರಾಮನಗರ ಜಿಲ್ಲೆಯ ಜಲಮೂಲಗಳು ಪೂರ್ಣ ಹಾಳಾಗಿ ಅಂತರ್ಜಲವೂ ಕಲುಷಿತವಾಗಿದೆ ಎಂದು ಟೀಕಿಸಿದ್ದಾರೆ.
ನೂರು ಎಕರೆ ಸರಕಾರಿ ಭೂಮಿಯನ್ನು ಅನಾಮತ್ತಾಗಿ ಎಗರಿಸಿಬಿಡುವ ರಿಯಲ್ ಎಸ್ಟೇಟ್ ಬ್ರ್ಯಾಂಡೆಡ್ ಪರಿಕಲ್ಪನೆ ಇದಲ್ಲದೆ ಮತ್ತೇನು? ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ.


