ಬೆಂಗಳೂರು: ಬಾಗಲಗುಂಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಹಗಲು ಮತ್ತು ರಾತ್ರಿ ಎರಡೂ ವೇಳೆ ಕನ್ನಾ ಹಾಕಿ ಕಳವು ಮಾಡುತ್ತಿದ್ದ ಕಳ್ಳನ ಬಂಧನವಾಗಿದೆ. ಬಂಧಿತ ಆರೋಪಿಯಿಂದ 2.76 ಲಕ್ಷ ರೂ. ಬೆಲೆ ಬಾಳುವ 40 ಗ್ರಾಂ ತೂಕದ ಚಿನ್ನಾಭರಣ ಮತ್ತು 113 ಗ್ರಾಂ ಬೆಳ್ಳಿ ವಸ್ತುಗಳ ಹಾಗೂ 54 ಸಾವಿರ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರನಗರದಲ್ಲಿ ದಿನಾಂಕ ಅ. 7 ರಿಂದ 18ರ ಮಧ್ಯಭಾಗದಲ್ಲಿ ಮಗಳ ಮದವೆಯ ಆಮಂತ್ರಣ ಪತ್ರ ನೀಡಲು ಊರಿಗೆ ಹೋಗಿದ್ದ ಸಮಯದಲ್ಲಿ ವ್ಯಕ್ತಿಯೋರ್ವರ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಮತ್ತು `ಬೆಳ್ಳಿ ವಸ್ತುಗಳನ್ನು ಕಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ. ಈ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಹಗಲು ಮತ್ತು ರಾತ್ರಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯಕೈಗೊಂಡ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನು ನೀಡಿದ ಮಾಹಿತಿ ಮೇರೆಗೆ ಸುಮಾರು 2,76 ಲಕ್ಷ ರೂ. ಮೌಲ್ಯದ 1 ಗ್ರಾಂ ತೂಕದ ಚಿನ್ನಾಭರಣ ಮತ್ತು 113 ಗ್ರಾಂ ಬೆಳ್ಳಿ ವಸ್ತುಗಳನ್ನು, 54 ಸಾವಿರ ರೂ. ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ, ಈ ವ್ಯಕ್ತಿಯು ಹಳೆಯ ಎಂ.ಪಿ. ಆಸಾಮಿಯಾಗಿದ್ದು, ಈತನು ಈ ಹಿಂದೆ ಬಾಗಲಗುಂಟೆ ಪೊಲೀಸ್ ಠಾಣೆ, ಸೋಲದೇವನಹಳ್ಳಿ ಪೊಲೀಸ್ ಠಾಣೆ, ಪೀಣ್ಯ ಪೊಲೀಸ್ ಠಾಣೆ, ಯಶವಂತಪುರ ಪೊಲೀಸ್ ಠಾಣೆ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳ ಕನ್ನಾ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈತನು ಸಂಜೆ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಹೋಗಿ, ರಾತ್ರಿ ಬಂದು ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತರಾದ ಸೈದುಲು ಆಡಾವತ್ ರವರ ಮಾರ್ಗದರ್ಶನದಲ್ಲಿ ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸದಾನಂದ ಎ ತಿಪ್ಪಣ್ಣವರ್ ಇವರ ನೇತೃತ್ವದಲ್ಲಿ, ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಜು.ಎಂ ಮತ್ತು ಸಿಬ್ಬಂದಿ ಆರೋಪಿಯನ್ನು ದಸ್ತಗಿರಿ ಮಾಡಿ, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.


