ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಸಮಾಲೋಚನೆ ನಡೆಸಿದರು.
ಸಮಾಲೋಚನೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ‘ಯಾರ್ಯಾರಿಗೆ ಏನೇನು ಉತ್ತರ ಕೊಡಬೇಕೋ ಖಂಡಿತ ಕೊಡ್ತೀನೆ. ಹೈ ವೋಲ್ವೇಜ್‌ಗೂ ಕೊಡ್ತೀನಿ, ಲೋ ವೋಲ್ವೇಜ್‌ಗೂ ಕೊಡ್ತೀನಿ, ನಕಲಿಗಳಿಗೂ ಕೊಡ್ತೀನಿ, ಲೂಟಿಗಳಿಗೂ ಕೊಡ್ತೀನಿ, ಎಲ್ಲರಿಗೂ ಕೊಡ್ತೀನಿ. ಸ್ವಲ್ಪ ಕಾಯಿರಿ’ ಎಂದರು.
ಬಿಜೆಪಿಯವರು ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಪ್ರತಿಭಟನೆ ಮಾಡಲಿ. ಅವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಅವರ ಲೂಟಿ ಜನರಿಗೆ ತಿಳಿಯುವುದು. ಎಲ್ಲಾ ಬಿಚ್ಚಿಡ್ತೀವಿ’ ಎಂದು ವೇಣುಗೋಪಾಲ್ ಜೊತೆ ತೆರಳಿದರು.
ತಡರಾತ್ರಿ ಬೆಂಗಳೂರಿಗೆ ಬಂದಿರುವ ವೇಣುಗೋಪಾಲ್ ಅವರು ಬೆಳಗ್ಗಿನ ಉಪಾಹಾರ ನೆಪದಲ್ಲಿ ಎಐಸಿಸಿ ಅಧ್ಯಕ್ಷರ ಮನೆಗೆ ತೆರಳಿದರು. ಅಲ್ಲಿಗೆ ಡಿ.ಕೆ. ಶಿವಕುಮಾರ್ ಕೂಡ ಬಂದರು. ಮೂವರೂ ಕೆಲಹೊತ್ತು ರಹಸ್ಯವಾಗಿ ಮಾತುಕತೆ ನಡೆಸಿದರು. ಈ ಸಭೆ ಕುತೂಹಲ ಮೂಡಿಸಿದೆ.
ಮೂವರು ನಾಯಕರು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಐಟಿ ದಾಳಿ, ವಿರೋಧ ಪಕ್ಷಗಳ ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.


