ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಈ ಅದೇಶಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿರುವುದರಿಂದ ಈ ಸಂಬಂಧ ಸ್ಪಷ್ಟನೆ ಹೊರಡಿಸಿರುವ ಸರ್ಕಾರ, ಈ ಆದೇಶ ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ.
ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಿಎಂ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.


