ಬೆಂಗಳೂರು: ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಿ, ಪರಿಣಿತರ ಸಮಿತಿ ಮೂಲಕ ಆಯ್ಕೆ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದ ಗಾಂಧಿಭವನದಲ್ಲಿ ಶವಿವಾರ ನಡೆದ ಸಂಸ್ಕೃತಿ ಸಂಗಮ- 23 ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಯಾವುದೇ ಪ್ರಶಸ್ತಿಯಾದರೂ ಅದಕ್ಕೆ ಗೌರವ ಇರಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ನೀಡಬಾರದು. ರಾಜ್ಯೋತ್ಸವದಷ್ಟೇ ವರ್ಷದ ಸಂಖ್ಯೆಯ ಪ್ರಶಸ್ತಿ ನೀಡುವ ಆಲೋಚನೆಯಿದೆ ಎಂದು ತಿಳಿಸಿದರು.
ನಾವೀಗ ಒಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಕರೆದಿದ್ದೆವು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಾತಿ, ಜಿಲ್ಲಾವಾರು ಮತ್ತು ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಎಲ್ಲವನ್ನು ಲೆಕ್ಕ ಹಾಕುವಾಗ, ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವ ಸವಾಲು ನಮ್ಮ ಮುಂದಿದೆ ಎಂದರು.


