ನವೆಂಬರ್ 1 ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನ. ನವೆಂಬರ್ ಬಂತೆಂದರೆ ಕರ್ನಾಟಕದ ಮನೆ ಮನಗಳಲ್ಲಿ ಕನ್ನಡದ ಕಹಳೆ ಮೊಳಗುತ್ತದೆ. ಕರ್ನಾಟಕ ಹೇಗೆ ರೂಪುಗೊಂಡಿತು ಎನ್ನುವುದಕ್ಕೆ ಒಂದು ಇತಿಹಾಸವಿದೆ. ಹೌದು, ಏಕೀಕರಣ ಚಳುವಳಿ 19ನೇ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956ರ ರಾಜ್ಯ ಪುನರ್ ವಿಂಗಡಣೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು.
ಕರ್ನಾಟಕ ಏಕೀಕರಣದ ಕನಸನ್ನು ಬಿತ್ತಿ ಕನ್ನಡವನ್ನು ಸಮರ್ಥವಾಗಿ ಕಟ್ಟುವಲ್ಲಿ ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನೋ, ಗ್ರೀನ್ ಹಿಲ್ ಆರ್. ಗ್ರಾಂಟ್, ಡಬ್ಲ್ಯು. ಎ. ರಸೆಲ್, ಜೆ. ಎಫ್. ಪ್ಲೇಟ್ ರಂತಹ ಬ್ರಿಟಿಷ್ ಅಧಿಕಾರಿಗಳೂ ಕೂಡ ಕೆಲಸ ಮಾಡಿದರು.
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆಯಿತು. ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು 1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಇದಾದ ಬಳಿಕ ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿ, ನವೆಂಬರ್ 1, 1956ರಂದು ಕನ್ನಡ ಭಾಷೆಯಾಡುವ ಹಲವು ಭಾಗಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು.
ಏಕೀಕರಣ ಆದಮೇಲೂ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿದ್ದು, ಹಲವರಿಗೆ ಬೇಸರ ಉಂಟುಮಾಡಿತು. ಇದೇ ಕಾರಣಕ್ಕೆ 1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.


