ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಚಾಮರಾನಗರದಲ್ಲಿ ಕಳೆದ 50 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಕೂಡ ಬೇವಿನಸೊಪ್ಪು, ಸಿಹಿ ತಿಂಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದ ತನಕ ರ್ಯಾಲಿ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೇವಿನಸೊಪ್ಪು, ಸಿಹಿ ಪ್ರದರ್ಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಸಿಹಿ ಕೊಟ್ಟು, ಕರ್ನಾಟಕದ ಪಾಲಿಗೆ ಕಹಿ ಕೊಟ್ಟು ಅನ್ಯಾಯ ಮಾಡಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕನ್ನಡ ರಾಜ್ಯೋತ್ಸವ ಸುವರ್ಣ ಮಹೋತ್ಸವದ ಸಿಹಿ ಒಂದೆಡೆಯಾದರೇ ತಮಿಳುನಾಡಿಗೆ ನೀರು ಹರಿಯುತ್ತಿರುವುದು ಕನ್ನಡಿಗರ ಪಾಲಿಗೆ ಕಹಿಯಾಗಿದೆ ಎಂದು ಕಿಡಿಕಾರಿದರು.


