ಬೆಂಗಳೂರು: ಯಾವುದೇ ದೇಶ ಮತ್ತು ಸಮಾಜದ ಅಭಿವೃದ್ಧಿಯು ಮಹಿಳೆಯರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ, ಮಹಿಳೆಯರಿಲ್ಲದೆ ವೈಯಕ್ತಿಕ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತವು ತನ್ನ ಇತಿಹಾಸ ಮತ್ತು ಸಂಸ್ಕೃತಿಯಿಂದಾಗಿ ಇಡೀ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ದೇಶವು ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಮಿಲಿಟರಿ ಶಕ್ತಿ ಇತ್ಯಾದಿಗಳಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸೇರಿದೆ. ಭಾರತೀಯ ಇತಿಹಾಸದಲ್ಲಿ ಮತ್ತು ನಮ್ಮ ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ಮಹಿಳೆಯರಿಗೆ ಗೌರವ ನೀಡುವ ಉಲ್ಲೇಖವಿದೆ. ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಒದಗಿಸುತ್ತದೆ ಮತ್ತು ಮಹಿಳೆಯರ ಪರವಾಗಿ ‘ದೃಢೀಕರಣ’ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ ಎಂದು ತಿಳಿಸಿದರು.


