ಕೇರಳದಲ್ಲಿ ಕೊರೊನಾ ರೂಪಾಂತರಿ ಜೆಎನ್.1 ಹೆಚ್ಚಳ ಕಂಡುಬಂದ ಹಿನ್ನೆಲೆ ಕೇಂದ್ರ ಸರ್ಕಾರ ಕೋವಿಡ್ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಕೊರೊನಾ ಹೊಸ ರೂಪಾಂತರ JN.1 ಸೋಂಕು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ನಿರಂತರವಾಗಿ ಹೆಚ್ಚುತ್ತಿರುವ ಕೊರೊನಾ ವೈರಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಭೆ ನಡೆಸಲಿದ್ದಾರೆ. ಈ ಸಭೆಯು ವಿಡಿಯೋ ಕಾನ್ಸರೆನ್ಸ್ ಮೂಲಕ ನಡೆಯಲಿದೆ. ಇದರಲ್ಲಿ ಆರೋಗ್ಯ ಸಚಿವರು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಸೇರಿದಂತೆ ಅನೇಕ ಜನರು ಭಾಗವಹಿಸಲಿದ್ದಾರೆ.
ಭಾರತಕ್ಕೂ ಈ ಹೊಸ ರೂಪಾಂತರಿ ವೈರಸ್ ಕಾಲಿಟ್ಟಿರುವುದರಿಂದ ಮತ್ತೊಮ್ಮೆ ಆತಂಕ ಎದುರಾಗಿದೆ. ಇದು ಹಿಂದಿನ ಒಮಿಕ್ರಾನ್ ತಳಿಯದ್ದೇ ರೋಗಲಕ್ಷಣಗಳನ್ನು ಹೊಂದಿದೆ. ಜ್ವರ, ವಿಪರೀತ ಶೀತ, ಗಂಟಲು ನೋವು ಈ ಹೊಸ ರೂಪಾಂತರಿಯ ಪ್ರಮುಖ ರೋಗಲಕ್ಷಣಗಳು. ಈ ರೋಗ ಹರಡದಂತೆ ಮಾಸ್ಕ್ ಧರಿಸುವುದು, ಗ್ಲೌಸ್ ಗಳನ್ನು ಹಾಕಿಕೊಳ್ಳುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ.


