ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ 2024ರ ಜ.9 ರಂದು ಚುನಾವಣೆ ನಿಗದಿ ಮಾಡಿ ಚುನಾವಣಾ ಅಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಯು 35 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಂಐಎಂ 2 ಹಾಗೂ 1 ಜೆಡಿಎಸ್ ಸದಸ್ಯರನ್ನು ಹೊಂದಿದೆ.
ವಾರ್ಡ್ ಮರುವಿಂಗಡಣೆ, ಮೇಯರ್, ಉಪ ಮೇಯರ್ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಕಲಬುರಗಿ ಹೈಕೋರ್ಟ್ ನಲ್ಲಿ ಕೆಲ ಸದಸ್ಯರು ಅರ್ಜಿ ಸಲ್ಲಿಸಿದ್ದ ಕಾರಣ ಚುನಾವಣೆಗೆ ತಡೆ ಬಿದ್ದಿತ್ತು. ಕಳೆದ ಅಕ್ಟೋಬರ್ 30 ರಂದು ನಡೆಯಬೇಕಿದ್ದ ಚುನಾವಣೆಗೂ ಹೈಕೋರ್ಟ್ ತಡೆ ನೀಡಿತ್ತು. ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೀಸಲಾತಿ ವಿಚಾರದಲ್ಲಿ ಕೆಲ ಸದಸ್ಯರು ಅರ್ಜಿ ಸಲ್ಲಿಕೆ ಮಾಡಿದ್ದರಿಂದ ತಡೆ ನೀಡಲಾಗಿತ್ತು. ಸದ್ಯ ಇದೀಗಾ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡು ಚುನಾವಣೆ ನಡೆಸಲು ಅನುಮತಿ ಸಿಕ್ಕಿದೆ. 2024ರ ಜನವರಿ 9 ರಂದು ಚುನಾವಣೆ ನಡೆಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ನೀಡಿದ್ದಾರೆ.


