ತುಮಕೂರು: ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಮಗುವಿನ ಜನನವನ್ನೆ ಮರೆಮಾಚಿ ಹಸುಗೂಸಿನ ಸಾವಿಗೆ ಕಾರಣವಾಗಿರೋ ಘಟನೆ ತುಮಕೂರಿನ ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಅತಿ ಸರಳವಾದ ಉಡುಪನ್ನು ಧರಿಸಿಕೊಂಡು ಗರ್ಭ ಧರಿಸಿರೋದನ್ನೇ ಅವಿವಾಹಿತೆ ಮುಚ್ಚಿಟ್ಟಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತಕೂಸನ್ನೆ ಬಯಲಿಗೆಸೆದಿದ್ದಳು. ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿ ಸಮಾಜಕ್ಕೆ ಹೆದರಿ ಈ ರೀತಿಯ ಕೃತ್ಯ ನಡೆಸಿದ್ದಾಳೆ.
ಮೂಲತಃ ಗೌರೀಪುರ ಗ್ರಾಮದ 25 ವರ್ಷದ ಯುವತಿ ಎರಡು ದಿನಗಳ ಹಿಂದಷ್ಟೇ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ, ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ನಂತರ ಮಗುವನ್ನ ಅಲ್ಲಿಯೇ ಪಕ್ಕದಲ್ಲಿ ಎಸೆದು ಮನೆಗೆ ತೆರಳಿದ್ದಳು. ಮನೆಗೆ ಹೋಗಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಳು. ಬೆಳಿಗ್ಗೆ ನವಜಾತ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ನವಜಾತ ಶಿಶುವಿನ ಶವ ಕೂಡ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಈ ಘಟನೆ ಸಂಬಂಧ ಮಹಿಳಾ ಪೊಲೀಸ್ ಠಾಣೆಗೆ ಮಕ್ಕಳ ರಕ್ಷಣಾ ಘಟಕದವರು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.


