ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹೊತ್ತಲ್ಲೇ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ಅನುಮತಿ ನೀಡುವಂತೆ ಕರ್ನಾಟಕ ಮುಜರಾಯಿ ಇಲಾಖೆ ಉತ್ತರ ಪ್ರದೇಶಕ್ಕೆ ಪತ್ರ ಬರೆದಿದ್ದು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ರಾಮ ಭಕ್ತರಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದೆ.
ಕರ್ನಾಟಕದ ಮುಜರಾಯಿ ಇಲಾಖೆ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದು ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕ ಯಾತ್ರಿ ನಿವಾಸ ಕಟ್ಟಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು, ರಾಮ ಭಕ್ತರು ಅಯೋಧ್ಯೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರಿಗೆ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದೆ. 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ರಾಜ್ಯದ ಭಕ್ತಾದಿಗಳ ಅನುಕೂಲಕ್ಕೆ ಮುಜರಾಯಿ ಇಲಾಖೆ ಅತಿಥಿ ಗೃಹ ನಿರ್ಮಾಣ ಮಾಡಲು ಸಿದ್ಧವಿದೆ ಅನುಮತಿ ನೀಡಿ ಎಂದು ಮನವಿ ಮಾಡಿದೆ.
ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಸಿಎಂ ಸಿದ್ರಾಮಯ್ಯ ಪತ್ರ ಬರೆದಿದ್ದಾರೆ. ಈ ಹಿಂದೆ 2020ರಲ್ಲೂ ಯುಪಿ ಸಿಎಂಗೆ ಯಡಿಯೂರಪ್ಪ ಕೂಡ ಪತ್ರ ಬರೆದು ಮನವಿ ಮಾಡಿದ್ದರು. ಇನ್ನು ಈಗ ರಾಜ್ಯದ ಮನವಿಗೆ ಯುಪಿ ಸರ್ಕಾರದ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ಪತ್ರ ಕಳುಹಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿಯನ್ನ ಮುಜರಾಯಿ ಇಲಾಖೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಿದೆ ಅಂತ ತಿಳಿಸಿದೆ. ಇನ್ನೊಂದು ವರುಷದಲ್ಲಿ ರಾಮಮಂದಿರದ ಬಳಿ ರಾಜ್ಯದ ಅತಿಥಿ ಗೃಹ ತಲೆ ಎತ್ತಲಿದೆ.


