ಗುಬ್ಬಿ: ಜಿಲ್ಲೆಯಲ್ಲಿ ಯಾವ ಪುಣ್ಯಾತ್ಮ ಜಾತಿ ವಿಷ ಬೀಜ ಬಿತ್ತಿದ್ದಾರೋ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಹೆರೂರಿನಲ್ಲಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಒಡೆದು, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಅನ್ಯಾಯ ನೋಡಿಕೊಂಡು ಸುಮ್ಮನಿರುವುದಿಲ್ಲ, ಅಂತಹವರ ವಿರುದ್ಧ ಜೀವ ಇರುವವರೆಗೂ ಹೋರಾಡುತ್ತೇನೆ ಎಂದರು.
ಒಕ್ಕಲಿಗ ಸಮುದಾಯದ ಗಂಗಟಕಾರ, ಕುಂಚಿಟಿಗ, ಮೊರಸು ಒಕ್ಕಲಿಗರೆಲ್ಲಾ ಒಂದೇ. ಆದರೆ ಕೆಲವರು ನಮ್ಮ ಸಮುದಾಯದ ಒಗ್ಗಟ್ಟು ಮುರಿದು, ನಮ್ಮ ಶಕ್ತಿ ನಾಶ ಮಾಡಲು ಹೊರಟಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಸಮುದಾಯದವರನ್ನೇ ಅಭ್ಯರ್ಥಿ ಮಾಡಿದ್ದೇನೆ. ನನ್ನ ಸೋಲಿನ ನೋವು ಮರೆಯಬೇಕಾದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕೇವಲ ಒಕ್ಕಲಿಗ ಸಮುದಾಯದವರಲ್ಲ ನಾನು ಈ ದೇಶದ ಎಲ್ಲಾ ಸಮುದಾಯ ನಾಯಕನಾಗಿ ರಾಜಕೀಯ ಜೀವನದಲ್ಲಿ ಮಹತ್ವದ ಕೆಲಸವನ್ನು ಮಾಡಿದ್ದೇನೆ. ದೇವೇಗೌಡರ ಶಕ್ತಿ ಏನು ಎಂಬುದನ್ನು ತಿಳಿಯದ ಜನರಿಗೆ ತುಮಕೂರು ಜಿಲ್ಲೆಯ ಜನತೆ ಸರಿಯಾದ ಪಾಠವನ್ನು ಕಲಿಸಬೇಕು ಎಂದು ನಾನು ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಎಲ್ಲಾ ಪ್ರೀತಿಯ ಮುಖಂಡರಿಗೆ ಹೇಳುತ್ತೇನೆ ಮನುಷ್ಯನಿಗೆ ಬರಿ ಹಣ ಮುಖ್ಯವಲ್ಲಾ ಮಾನವೀಯತೆ ಮುಖ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು
ತುಮಕೂರು ಜಿಲ್ಲೆಯ ಕೆಲವು ತಾಲೂಕಿನಲ್ಲಿ ನನ್ನ ಬಗ್ಗೆ ಹಗುರವಾಗಿ ಮಾತಾನಾಡಿದ ವ್ಯಕ್ತಿಗಳ ನಡುವೆ ನಾನಿನ್ನೂ ಬದುಕಿದ್ದೇನೆ. ನನಗೆ ಈ ರಾಜ್ಯದ ಜನತೆಯ ಪರ ಹೋರಾಟ ಮಾಡುವಂತ ಶಕ್ತಿ ಇನ್ನೂ ನನ್ನಲ್ಲಿದೆ. ನಾನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನನ್ನ ಬಗ್ಗೆ ಇಲ್ಲಾದ ಅಪಪ್ರಚಾರ ಮಾಡಿ ನನ್ನ ಸೋಲಿಗೆ ಕಾರಣರಾದವರಿಗೆ ಈ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ರವರಿಗೆ ಮತ ಚಲಾಯಿಸಿ ಜಯಗಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ವಿಶೇಷವಾಗಿ ತುಮಕೂರು ಜಿಲ್ಲೆಯನ್ನು ಜೆಡಿಎಸ್ ಪಕ್ಷವು ಮರೆಯುವಂತಿಲ್ಲ. ನಮ್ಮ ಪಕ್ಷ ಬಲವಾಗಿ ಬೆಳೆಯಲು ಈ ಜಿಲ್ಲೆ ನಮಗೆ ತವರೂರು ಆಗಿದೆ. ನನ್ನ ರಾಜಕೀಯ ಜೀವನದಲ್ಲಿ ವಿಶೇಷ ಗೌರವವನ್ನು ನಾನು ಈ ಜಿಲ್ಲೆಯ ಮೇಲೆ ಇಟ್ಟಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಿಲ್ಲೆಯ ರಾಜಕೀಯ ಕೆಲವು ಚಟುವಟಿಕೆಗಳು ನನಗೆ ಸಾಕಷ್ಟು ನೋವನ್ನುಂಟು ಮಾಡಿದೆ. ನಮ್ಮವರಿಂದಲೇ ಆಗುತ್ತಿರುವ ನೋವು ಹೇಳತೀರದು. ನಮ್ಮಿಂದ ಯಾವುದೇ ಅನ್ಯಾಯವಾಗಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಸರ್ವ ಜನಾಂಗವನ್ನು ಸಮಾನ ರೀತಿಯಲ್ಲಿ ನೋಡುವಂತ ಪಕ್ಷ ನಮ್ಮದಾಗಿದೆ . ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನೀಡಿದೆ ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಬಲ ತುಂಬಲು ಜೆಡಿಎಸ್ ಪಕ್ಷ ಮತ್ತಷ್ಟು ಕೆಲಸ ಮಾಡಲು ಈ ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶ ನಿರ್ಣಾಯಕವಾಗಲಿದೆ. ಈ ಹಿನ್ನಲೆ ಆರ್.ಅನಿಲ್ ಗೆ ಮತ ಹಾಕುವಂತೆ ಮನವಿ ಮಾಡಿದರು.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಸಾರ್ವತ್ರಿಕ ಚುನಾವಣೆಯಂತೆ ಮೆರೆಗು ಪಡೆದ ವಿಧಾನ ಪರಿಷತ್ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಗೆಲುವು ಸಾಧಿಸುವಷ್ಟಿದೆ. ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ. ಜೊತೆಗೆ ಮುಂದಿನ 2023ಕ್ಕೆ ಕುಮಾರಣ್ಣನವರ ಸರ್ಕಾರ ಸ್ಥಾಪಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಗ್ರಾಮ ಸ್ವರಾಜ್ಯ ಕನಸು ದೇವೇಗೌಡರ ಕನಸಾಗಿದೆ. ಇದರ ಸಕಾರಕ್ಕೆ ಈ ಚುನಾವಣೆ ಗೆಲುವು ಸಾಕ್ಷಿಯಾಗಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಮಾತ್ರ ಇದೆ. ಈಗಾಗಲೇ ಜನರಿಗೆ ಬೇಸರ ತಂದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಮಾತನಾಡಿ, ಗ್ರಾಮೀಣ ಜನರ ಸಮಸ್ಯೆಗೆ ಉತ್ತರ ನೀಡಬಲ್ಲ ಜೆಡಿಎಸ್ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿ.ಪಂ. ಮಾಜಿ ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಿ.ರಾಮಾಂಜಿನಪ್ಪ, ಮುಖಂಡರಾದ ಎಂ.ಗಂಗಣ್ಣ, ಬಿ.ಎಸ್.ನಾಗರಾಜು, ಶಿವಲಿಂಗಯ್ಯ, ಕೊಂಡ್ಲಿ ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ನರಸೇಗೌಡ, ನರಸಿಂಹಮೂರ್ತಿ ಇತರರು ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700