ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ.
ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಐದನೇ ಅಭ್ಯರ್ಥಿಯಾಗಿ ಉದ್ಯಮಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಅವರು ಗೆಲ್ಲಬೇಕು ಎಂದರೆ ಸುಮಾರು ಆರೇಳು ಹೆಚ್ಚುವರಿ ಮತಗಳ ಅಗತ್ಯವಿದೆ. ಇದನ್ನು ಪಡೆಯಲು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


