ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಣಿಕೆನಹಳ್ಳಿ ಗ್ರಾಮ ದೇವತೆ ಕೆಂಪಮ್ಮ ದೇವಾಲಯದ ದಲಿತರ ಪ್ರವೇಶದ ವಿಚಾರದಲ್ಲಿ, ಗೊಂದಲಗಳು ಸೃಷ್ಟಿಯಾಗಿದ್ದು ಅಧಿಕಾರಿಗಳು ಕೆಲವು ಸ್ವಹಿತಾಸಕ್ತಿ ವಹಿಸಿ ಗ್ರಾಮಕ್ಕೆ ಮುಜುಗರನ್ನುಂಟು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್ಮರಿಯ ಅಭಿಪ್ರಾಯಪಟ್ಟರು.
ಕುಣಿಕೆನಹಳ್ಳಿ ದೇವಾಲಯದ ಆವರಣದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದಲೂ ಸಂಪ್ರದಾಯ ಬದ್ಧವಾಗಿ ಪೂಜಾ ವಿಧಾನಗಳು ಹಬ್ಬ ಹರಿದಿನ ಜಾತ್ರೆಗಳು ನಡೆದುಕೊಂಡು ಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರಲ್ಲಿ ಯಾವುದೇ ಸಮುದಾಯದ ಜನರಿಗೆ ತಾರತಮ್ಯವನ್ನು ಮಾಡದಿದ್ದರೂ ಕೂಡ, ಅಧಿಕಾರಿಗಳು ಕೆಲವು ಸಮಾಜಸ್ವಾಸ್ತ್ಯ ಕೆಡಿಸುವ ವ್ಯಕ್ತಿಗಳ ಮಾತು ಕೇಳಿ ಗ್ರಾಮಕ್ಕೆ ಆಗಮಿಸಿ ಗ್ರಾಮಕ್ಕೆ ಹಾಗೂ ಗ್ರಾಮಸ್ಥರಿಗೆ ಮುಜುಗರವನ್ನು ಉಂಟುಮಾಡಿದ್ದು ಈ ವಿಚಾರ ಗ್ರಾಮಸ್ಥರಿಗೆ ಬಹಳ ನೋವನ್ನು ತಂದಿದೆ ಎಂದು ತಿಳಿಸಿ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರುಗಳ ಸಭೆಯನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಬಹುದಾಗಿತ್ತು. ಅದನ್ನು ಮಾಡದೆ ಅಧಿಕಾರಿಗಳು ಏಕಾಏಕಿ ಪೊಲೀಸರ ಸರ್ಪಗಾವಲಿನಲ್ಲಿ ದಲಿತರನ್ನು ದೇವಾಲಯ ಪ್ರವೇಶವನ್ನು ಮಾಡಿಸುವ ಔಚಿತ್ಯವಾದರೂ ಏನಿತ್ತು?ಎಂದು ಪ್ರಶ್ನಿಸಿ, ಯಾವ ಕಾಲದಲ್ಲಿಯೂ ಸಹ ದೇವಾಲಯದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಮಾಡಿಲ್ಲ ಹಾಗೂ ದಲಿತ ವಿರೋಧಿ ನೀತಿಯನ್ನು ಸಹ ಅನುಸರಿಸಿಲ್ಲ, ದೇವಾಲಯ ಪ್ರವೇಶವನ್ನು ಸಹ ನಿರಾಕರಿಸಿಲ್ಲ. ಈ ಎಲ್ಲಾ ವಿಚಾರಗಳು ಗ್ರಾಮದ ಸ್ವಾಸ್ಥ್ಯವನ್ನು ಹಾಳು ಮಾಡುವ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು ಇಂತಹ ಸುಳ್ಳು ಆರೋಪ ಮಾಡಿದವರ ಮೇಲೆ ಅಧಿಕಾರಿಗಳು ಕ್ರಮ ಜರುಗಿಸಿ ಗ್ರಾಮದಲ್ಲಿ ಸಹಬಾಳ್ವೆಯಿಂದ ಶಾಂತಿಯುತವಾಗಿ ಜೀವನ ಮಾಡಲು ಸಹಕರಿಸಿ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರುಗಳ ಪರವಾಗಿ ತಾಕೀತು ಮಾಡಿದರು.
ಗ್ರಾಮದಲ್ಲಿ ಯಾವುದೇ ಅನಾಹುತಗಳು ನಡೆದರು ಸಹ ಇದಕ್ಕೆ ಅಧಿಕಾರಿಗಳು ಹಾಗೂ ಕೆಲವು ಸ್ವಹಿತಾಸಕ್ತಿಯ ವ್ಯಕ್ತಿಗಳು ನೇರ ಹೊಣೆಯಾಗಿರುತ್ತಾರೆ ಎಂದು ತಿಳಿಸಿ, ಹಿಂದಿನಿಂದಲೂ ನಮ್ಮ ಗ್ರಾಮವು ಅಸ್ಪೃಶ್ಯತೆ ಆಚರಣೆ ವಿರುದ್ಧವಾಗಿ ನಡೆದುಕೊಂಡು ಬಂದಿದೆ. ನಮ್ಮಲ್ಲಿ ಯಾವುದೇ ಅಸ್ಪೃಶ್ಯತೆ ಆಚರಣೆ ಆಚರಿಸಿಯೇ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಡಿ ಗೌಡರಾದ ಶೇಖರ್, ಗಂಗಾಧರಯ್ಯ, ಶಿವಾನಂದ್, ಚಂದ್ರಯ್ಯ, ಕೃಷ್ಣೇಗೌಡ, ಗಂಗಾಧರ್, ಧನಂಜಯ, ಭೈರಪ್ಪ, ಗಣೇಶ್, ಮರಿಯಣ್ಣ ಸೇರಿದಂತೆ ಗ್ರಾಮಸ್ಥರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು, ಎಂ ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


