ಹಾಸನ: ನಾನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನನ್ನು ಬೆಂಬಲಿಸಿ ಮೊದಲ ಪ್ರಾಶಸ್ತ್ಯ ಮತ ಕೊಡಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಗೆಲುವಿಗಿಂತ ಸೋಲೇ ಜಾಸ್ತಿಯಾಗಿದೆ. ರಾಜಿ ಮಾಡಿಕೊಂಡಿದ್ದರೆ ಏನು ಬೇಕಾದರೂ ಆಗಬಹುದಿತ್ತು. ನನ್ನನ್ನು ಕ್ಯಾಬಿನೆಟ್ ಗೆ ತೆಗೆದುಕೊಳ್ಳಲು ದೇವರಾಜ್ ಅರಸು ಸಾಕಷ್ಟು ಪ್ರಯತ್ನ ಮಾಡಿದ್ದರು ಎಂದರು.
ವಿಧಾನ ಪರಿಷತ್ ಒಂದು ಗೌರವದ ಸ್ಥಾನವಾಗಿ ಕಾಣಬೇಕು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಿದ್ದೇನೆ. ಶಿಕ್ಷಕರ ಬೇಡಿಕೆಗಳು ಸಾಕಷ್ಟು ಇದೆ. ಶಿಕ್ಷಕರ ಪರವಾಗಿ ಪರಿಷತ್‌ನಲ್ಲಿ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ಹೀಗಾಗಿ ನನ್ನನ್ನು ಬೆಂಬಲಿಸಿ ಮೊದಲ ಪ್ರಾಶಸ್ತ್ಯ ಮತ ಕೊಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಮಾತು ಮುಂದುವರಿಸಿದ ಅವರು, ರಾಜ್ಯದಲ್ಲಿ ಯಾವ ಮಹಿಳೆಯರಿಗೆ ಅನ್ಯಾಯ ಆಗಿದೆ, ಯಾರು ನೋವಿನಲ್ಲಿ ಇದಾರೆ. ನೊಂದ ಮಹಿಳೆಯರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ಶೋಷಣೆಗೆ ಒಳಗಾದ ಮಹಿಳೆಯರ ಪರವಾಗಿ ನಾನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಏನೆಂದು ಮಾತನಾಡೋದು ಎಂದು ಕಳವಳ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಈ ವಿಷಯದ ಬಗ್ಗೆ ನಾನು ಮಾತನಾಡೋದೇ ಇಲ್ಲ. ಮೇ 30ರ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ಈ ಹೋರಾಟಕ್ಕೆ ಬೆಂಬಲ ಇಲ್ಲ ಎಂದು ಹೇಳೋಕೆ ಆಗುತ್ತಾ ಎಂದಿದ್ದಾರೆ.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನ ಈವರೆಗೆ ಬಂಧನ ಮಾಡದೇ ಇರುವುದು ಸರ್ಕಾರದ ವೈಫಲ್ಯ ಅಲ್ಲವೇ. ಇದು ಅತ್ಯಂತ ಅನ್ಯಾಯದ ಘಟನೆ. ಸರ್ಕಾರ ಈ ಪ್ರಕರಣದಲ್ಲಿ ಏನು ಮಾಡಲಿದೆ ನೋಡೋಣ. ಎಸ್‌ಐಟಿ ಎಷ್ಟರ ಮಟ್ಟಿಗೆ ತನಿಖೆ ಮಾಡಲಿದೆ ನೋಡೋಣ. ಸರ್ಕಾರ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಇದು ರಾಜ್ಯದಲ್ಲಿ ಎಂದೂ ಆಗದಿರುವ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ ಇದು. ಈ ಘಟನೆ ನೋಡಿ ಇಡೀ ಸಂಪುಟವೇ ರಾಜಿನಾಮೆ ಕೊಟ್ಟಿದ್ದರೆ ಒಂದು ಘನತೆ ಬರುತ್ತಿತ್ತು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


