ಒಡಿಶಾ, ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಕನಿಷ್ಠ 22 ಮಂದಿ ಬಿಸಿಲ ಬೇಗೆಯಿಂದ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಗುರುವಾರ ಕೇವಲ ಏಳು ಗಂಟೆ ಅವಧಿಯಲ್ಲಿ ಆರು ಮಹಿಳೆಯರು ಸೇರಿದಂತೆ ಹತ್ತು ಮಂದಿ ಶಾಖದ ಹೊಡೆತಕ್ಕೆ ಬಲಿಯಾಗಿದ್ದರೆ, ಬಿಹಾರದಲ್ಲಿ 24 ಗಂಟೆಗಳಲ್ಲಿ 9 ಮಂದಿ ಹಾಗೂ ಜಾರ್ಖಂಡ್ ನಲ್ಲಿ ಮೂವತ್ತಾರು ಗಂಟೆ ಅವಧಿಯಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ.
ನಾಗ್ಪುರದಲ್ಲಿ ಮೇ 24 ರಿಂದ 30ರ ಅವಧಿಯಲ್ಲಿ ಕನಿಷ್ಠ 20 ಮಂದಿ ಅಪರಿಚಿತ ವ್ಯಕ್ತಿಗಳು ಬಿಸಿಲ ಶಾಖದಿಂದ ಮೃತಪಟ್ಟಿದ್ದಾರೆ. ಉಷ್ಣಗಾಳಿಯ ಹೊಡೆತಕ್ಕೆ ಸಿಲುಕಿ ಇವರು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಒಡಿಶಾದಲ್ಲಿ ಸಂಭವಿಸಿದ ಎಲ್ಲ ಸಾವುಗಳು ರೂರ್ಕೆಲ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದು, ಗುರುವಾರ ಮಧ್ಯಾಹ್ನ 1.30ರಿಂದ ರಾತ್ರಿ 8.40ರ ಅವಧಿಯಲ್ಲಿ ಘಟಿಸಿವೆ. ರೂರ್ಕೆಲಾದಲ್ಲಿ ಗುರುವಾರ ಗರಿಷ್ಠ ತಾಪಮಾನ 44.9 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಮೃತಪಟ್ಟ ಎಲ್ಲರೂ 23 ರಿಂದ 70 ವರ್ಷ ವಯಸ್ಸಿನವರು. ಜೀವ ಕಳೆದುಕೊಂಡ ಆರು ಮಹಿಳೆಯರು 30 ರಿಂದ 69 ವಯಸ್ಸಿಯವರು ಎಂದು ಹೇಳಲಾಗಿದೆ.
ಹತ್ತು ಮಂದಿಯ ಪೈಕಿ ಎಂಟು ಮಂದಿ ಆಸ್ಪತ್ರೆಗೆ ಕರೆತರುವ ವೇಳೆಗೆ ಮೃತಪಟ್ಟಿದ್ದರೆ, ಇಬ್ಬರು ಚಿಕಿತ್ಸೆ ವೇಳೆ ಜೀವ ಕಳೆದುಕೊಂಡಿದ್ದಾರೆ. ಉಷ್ಣಗಾಳಿಯ ಹೊಡೆತಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ ಎಂದು ಆರ್ ಜಿ ಎಚ್ ನಿರ್ದೇಶಕ ಗಣೇಶ್ ಪ್ರಸಾದ್ ದಾಸ್ ಹೇಳಿದ್ದಾರೆ.
ಬಿಹಾರದಲ್ಲಿ ಗುರುವಾರ 47.1 ಡಿಗ್ರಿ ಸೆಲ್ಷಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಮೃತಪಟ್ಟವರ ಪೈಕಿ ಐದು ಮಂದಿ ಚುನಾವಣಾ ಅಧಿಕಾರಿಗಳು. ನಾಲ್ಕು ಮಂದಿ ಭೋಜಪುರದಲ್ಲಿ ಹಾಗೂ ಬಕ್ಸರ್, ರೋಹ್ಟಸ್, ಅರ್ವಾಲ್, ಬೆಗುಸರಾಯ್ ಮತ್ತು ಪಾಟ್ನಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


