ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಗೆ 350 ಸ್ಥಾನಗಳನ್ನು ನೀಡಿವೆ. ಆದರೆ ಆಮ್ ಆದ್ಮಿ ಪಕ್ಷದ ಮುಖಂಡ ಸೋಮನಾಥ್ ಭಾರ್ತಿ ಇದನ್ನು ಬಲವಾಗಿ ಅಲ್ಲಗಳೆದಿದ್ದು, ಚುನಾವಣಾ ಸಮೀಕ್ಷೆಗಳು ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಇಂಡಿಯಾ ಮೈತ್ರಿಕೂಟದಿಂದ ನವದೆಹಲಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಭಾರ್ತಿ, ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎನ್ನುವುದು ಮಂಗಳವಾರ ಮತ ಎಣಿಕೆ ಪೂರ್ಣಗೊಂಡಾಗ ದೃಢವಾಗಲಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ದೆಹಲಿಯ ಏಳು ಕ್ಷೇತ್ರಗಳ ಪೈಕಿ ಆರರಲ್ಲಿ ಜಯ ಸಾಧಿಸಲಿದೆ. 2019ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಇಂಡಿಯಾ ಮೈತ್ರಿಕೂಟ ಎಲ್ಲ ಏಳು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭಾರ್ತಿ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮೂರು ಹಾಗೂ ಆಮ್ ಆದ್ಮಿ ಪಾರ್ಟಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿವೆ.
“ನನ್ನ ಹೇಳಿಕೆಯನ್ನು ಬರೆದಿಟ್ಟುಕೊಳ್ಳಿ; ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ. ಜೂನ್ 4ರಂದು ಎಲ್ಲ ಚುನಾವಣಾ ಸಮೀಕ್ಷೆಗಳು ತಪ್ಪು ಎನ್ನುವುದು ಸಾಬೀತಾಗಲಿದೆ. ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದಿಲ್ಲ. ದೆಹಲಿಯ ಎಲ್ಲ ಏಳು ಕ್ಷೇತ್ರಗಳು ಇಂಡಿಯಾ ಮೈತ್ರಿಕೂಟದ ಪಾಲಾಗಲಿವೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ನವದೆಹಲಿ ಕ್ಷೇತ್ರದಲ್ಲಿ ಸೋಮನಾಥ್ ಭಾರ್ತಿ, ಮಾಜಿ ಕೇಂದ್ರ ಸಚಿವ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ವಿರುದ್ಧ ಸ್ಪರ್ಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


