ಚಪ್ಪಲಿ ಇಲ್ಲದೆ ಮನೆಯಿಂದ ಆಚೆ ಬರೋದು ಸ್ವಲ್ಪ ಕಷ್ಟ. ಇನ್ನು ಜೀವನಪೂರ್ತಿ ಬರಿಗಾಲಿನಲ್ಲಿ ಓಡಾಡಲು ಸಾಧ್ಯವೇ? ಕೆಲವು ಸಾಧು ಮತ್ತು ಸಂತರನ್ನು ಹೊರತುಪಡಿಸಿ, ಎಲ್ಲ ಸಾಮಾನ್ಯ ಜನರು ಚಪ್ಪಲಿಯನ್ನು ಧರಿಸುತ್ತಾರೆ. ವಿಶೇಷ ಅಂದ್ರೆ ಕಾಲಿವುಡ್‌ನ ಖ್ಯಾತ ನಟ ವಿಜಯ್ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ.
ವಿಜಯ್ ಆಂಟೋನಿ ಓರ್ವ ಬಹುಮುಖ ಪ್ರತಿಭೆ. ಮ್ಯೂಸಿಕ್ ಡೈರೆಕ್ಟರ್, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಲಂಡಿಲ್ ಪತ್ತೆನೆ, ಡಿಸುಮೆ, ವೆಡೆತ್ತಕಾರನ್ ಮತ್ತು ಅಂಗಡಿತ್ ಸ್ಟ್ರೀಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾನ್, ಕಲಿ, ಪಿಚೈಕಾರನ್, ಸೈತಾನ್, ಕೊಲೈಗಾರ, ವಿಜಯ್ ರಾಘವನ್, ಪಿಚೈಕಾರನ್ 2 ಮತ್ತು ತಿಮಿರು ಪುಡಿಚವನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್ 1 ಮತ್ತು ಭಾಗ 2ನ್ನು ವಿಜಯ್ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.
ಇದೀಗ ವಿಜಯ್ ಆಂಟೋನಿ ತುಫಾನ್ ಎಂಬ ಸಿನಿಮಾದೊಂದಿಗೆ ಶೀಘ್ರದಲ್ಲೇ ತೆರೆಯ ಮೇಲೆ ಬರಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದ್ದು, ವಿಜಯ್ ಆಂಟೋನಿ ಈ ಸಮಾರಂಭದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್ ಆಂಟೋನಿ ನೀಡಿದ ಉತ್ತರವೇನೆಂದರೆ, ಬರಿಗಾಲಿನಲ್ಲಿರುವುದು ತುಂಬಾ ಚೆನ್ನಾಗಿದೆ. ಮೊದಲಿಗೆ ಸ್ವಲ್ಪ ನೋವು ಮತ್ತು ವಿಚಿತ್ರವೆನಿಸುತ್ತದೆ. ಆದರೆ, ನಂತರ ಅದು ಕೂಲ್ ಎನಿಸುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ನಾನು ಜೀವನ ಪರ್ಯಂತ ಹೀಗೆ ಬರಿಗಾಲಿನಲ್ಲಿ ಇರಲು ಸಂಕಲ್ಪ ಮಾಡಿದ್ದೇನೆ, ಇದರಲ್ಲಿ ಯಾವುದೇ ಮುಜುಗರ ಇಲ್ಲ. ಬೇಕಾದರೆ ನೀವೂ ಟ್ರೈ ಮಾಡಿ ನೋಡಿ ಎಂದರು.
ಅಂದಹಾಗೆ, ಕಳೆದ ವರ್ಷ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಅಂದಿನಿಂದ ಅವರು ಸ್ವಲ್ಪ ವೇದಾಂತಿಕವಾಗಿ ಮಾತನಾಡುತ್ತಿದ್ದಾರೆ. ಈ ಹೊಸ ಬದಲಾವಣೆಗೆ ಇದು ಕೂಡ ಒಂದು ಕಾರಣ ಆಗಿರಲುಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


