ಕರ್ನಾಟಕ ಬಿಡಿ. ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್ ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ.
ʼದೇಶದಲ್ಲಿ ಎಫ್ ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು’ ಎಂದು ಅವರು ತಿಳಿಸಿದರು.
ಕುಸಿತದ ವಿವರಗಳು: ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್ ಗೆ ಕುಸಿದಿದೆ.
ʼಹಣಕಾಸು ವರ್ಷ 2020-21ರಲ್ಲಿ ₹ 4.42 ಲಕ್ಷ ಕೋಟಿ, 2021-22ರಲ್ಲಿ ₹ 4.37 ಲಕ್ಷ ಕೋಟಿ, 2022-23ರಲ್ಲಿ ₹ 3.67 ಲಕ್ಷ ಕೋಟಿ ಮತ್ತು 2023-24ರಲ್ಲಿ ₹ 3.47 ಲಕ್ಷ ಕೋಟಿಗೆ ಇಳಿದಿದೆ. ಕಳೆದ 4 ವರ್ಷಗಳಲ್ಲಿ ಎಫ್‌ಡಿಐ ನಿರಂತರವಾಗಿ ಹೀಗೆ ಕುಸಿಯುತ್ತಲೇ ಸಾಗಿರುವುದರತ್ತ ಸಚಿವರು ಬೆಳಕು ಚೆಲ್ಲಿದ್ದಾರೆ.
ʼದೇಶದಲ್ಲಿ ಹೂಡಿಕೆಯಾಗುವ ʼಎಫ್‌ಡಿಐʼನಲ್ಲಿ ಬಹುಪಾಲು ಈಕ್ವಿಟಿ ಸ್ವರೂಪದಲ್ಲಿ ಇರುತ್ತದೆ. ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಎಫ್‌ಡಿಐ ಈಕ್ವಿಟಿ ಹೂಡಿಕೆಯು ಕಳವಳಕಾರಿ ಮಟ್ಟದಲ್ಲಿ ಇಳಿಕೆಯಾಗಿದೆ. 2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಹೂಡಿಕೆಯಲ್ಲಿನ ಇಳಿಕೆಯು ಶೇ. 3 ರಷ್ಟು ಮಾತ್ರ ದಾಖಲಾಗಿದೆ. ಆದರೆ, ಅದಕ್ಕೂ ಮುಂಚಿನ 4 ಹಣಕಾಸು ವರ್ಷಗಳಲ್ಲಿನ ಇಳಿಕೆ ಪ್ರಮಾಣವು ಶೇ 25ಕ್ಕಿಂತಲೂ ಹೆಚ್ಚಿಗೆ ಇದೆʼ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಉದಾಸೀನ ಧೋರಣೆ:
ʼಎಫ್ ಡಿಐ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿ ಇದ್ದ ರಾಜ್ಯವು ಈಗ 3ನೇ ಸ್ಥಾನಕ್ಕೆ ಇಳಿಯಲು ಕೇಂದ್ರ ಸರ್ಕಾರದ ಧೋರಣೆ ಹಾಗೂ ಈ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಮುಖ್ಯ ಕಾರಣಗಳಾಗಿವೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಒಲವು ತೋರಿಸಿದ್ದ ವಿದೇಶಿ ಹೂಡಿಕೆದಾರರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಒತ್ತಾಸೆಯ ಮೇರೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳತ್ತ ಮುಖ ಮಾಡಿರುವುದೂ ಇದಕ್ಕೆ ಕಾರಣʼ ಎಂದು ಸಚಿವರು ವಿವರಿಸಿದ್ದಾರೆ.
ʼದೇಶದ ಪರಿಸ್ಥಿತಿಯೇ ಹೀಗಿದ್ದ ಮೇಲೆ ಅದರ ಪರಿಣಾಮ ರಾಜ್ಯದ ಮೇಲೂ ಆಗುತ್ತದೆ. ಆದರೆ, ಅದು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಫ್‌ಡಿಐ ಪಾತಾಳಕ್ಕೆ ಇಳಿದಷ್ಟು ಆಗಿಲ್ಲ. 2023-24ರಲ್ಲಿ ಇಳಿಕೆ ಪ್ರಮಾಣ ಕಡಿಮೆ ಆಗಿದ್ದು, ಪರಿಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಲು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿದೆ. ಎಫ್‌ಡಿಐ ಆಕರ್ಷಿಸುವಲ್ಲಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಸೂಕ್ತ ಭೂಮಿಕೆ ಸಿದ್ಧಪಡಿಸುವಲ್ಲಿ ರಾಜ್ಯ ಸರ್ಕಾರವು ಸರ್ವ ಪ್ರಯತ್ನ ಮಾಡುತ್ತಿದೆʼ ಎಂದು ಹೇಳಿದ್ದಾರೆ.
ʼಕರ್ನಾಟಕದಲ್ಲಿ ಎಫ್‌ಡಿಐಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು, ನವೋದ್ಯಮ ಹಾಗೂ ಐಟಿ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳಿಗೆ ನಿದರ್ಶನಗಳಾಗಿವೆ. ಕೇಂದ್ರ ಸರ್ಕಾರದ ನೀತಿ ನಿರೂಪಣೆಯಲ್ಲಿನ ದೋಷಗಳ ಕೊಡುಗೆಯೂ ಗಮನಾರ್ಹವಾಗಿವೆ. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ತನ್ನದೇ ಪಕ್ಷದ ಅಧಿಕಾರದಲ್ಲಿದ್ದರೂ (ಡಬಲ್‌ಎಂಜಿನ್ ಸರ್ಕಾರ) ಎಫ್‌ಡಿಐ ಕುಸಿತ ತಡೆಗಟ್ಟಲು ಕ್ರಮ ಕೈಗೊಳ್ಳದಂತೆ ಪ್ರಭಾವ ಬೀರುವಲ್ಲಿ ವಿಫಲವಾಗಿರುವುದೂ ವೇದ್ಯವಾಗುತ್ತದೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳತ್ತ ಹರಿಯುತ್ತಿದ್ದ ಎಫ್‌ಡಿಐ ಯನ್ನು ರಾಜ್ಯದತ್ತ ತಿರುಗುವಂತೆ ಮಾಡುವಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ರಚನಾತ್ಮಕ ಪ್ರಯತ್ನ ಮಾಡದಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆʼ ಎಂದು ಪಾಟೀಲ ಅವರು ಹೇಳಿದ್ದಾರೆ.
ʼಇಂತಹ ಪ್ರತಿಕೂಲತೆಗಳ ನಡುವೆಯೂ ರಾಜ್ಯವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಯ ಆಕರ್ಷಕ ತಾಣವಾಗಿ ಗಮನ ಸೆಳೆಯುತ್ತಿದೆʼ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ʼಕರ್ನಾಟಕ ರಾಜ್ಯವು ವಿಶ್ವದಾದ್ಯಂತ ವಿವಿಧ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಿಂದ ಬಂಡವಾಳ ಹೂಡಿಕೆಯನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ. ಆದರೆ, ದೇಶದ ಆರ್ಥಿಕ ಪ್ರಗತಿಯ ಹಾದಿಯಲ್ಲಿನ ಅಡಚಣೆಗಳು, ಹೂಡಿಕೆದಾರರ ಬದಲಾದ ಒಲವು – ನಿಲುವು, ಜಾಗತಿಕ ವಿದ್ಯಮಾನಗಳ ಕಾರಣಕ್ಕೆ ರಾಜ್ಯದಲ್ಲಿಯೂ ʼಎಫ್‌ಡಿಐʼ ಒಳಹರಿವು ಕಡಿಮೆಯಾಗಿದೆʼ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


