ಸರಗೂರು: ತಾಲೂಕಿನ ಹಂಚಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಡದಹಳ್ಳಿ ಹಾಡಿಗೆ, ದಡದಹಳ್ಳಿ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡಲು ಆಗ್ರಹಿಸಿ, ಕೆಸರು ತುಂಬಿದ ರಸ್ತೆಗೆ ಗಿಡ ನೆಟ್ಟು ಶುಕ್ರವಾರ ದಂದುದು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿವತಿಯಿಂದ ಪ್ರತಿಭಟನೆ ಮಾಡಲಾಯಿತು.
ನಂತರ ಮಾತನಾಡಿದ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಮುಖಂಡ ಸುನಿಲ್ ಟಿ.ಆರ್., “ದಡದಹಳ್ಳಿ ಹಾಡಿಯಲ್ಲಿ ಆದಿವಾಸಿ ಜನರು ಕಾಡಂಚಿನ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪ್ರತಿನಿತ್ಯ ಅವರು ಕಲ್ಲು, ಮಣ್ಣು, ಗುಂಡಿಗಳಿರುವ ಹಾಗೂ ಮಳೆ ಬಂದಾಗ ಕೆಸರುಗದ್ದೆ ಅಂತೆ ಆಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ನಡೆದು ಓಡಾಡುವ ಪರಿಸ್ಥಿತಿ ಇದೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಜೀವ ಭಯದಿಂದ ಓಡಾಡುವಂತಾಗಿದೆ. ಇನ್ನೊಂದೆಡೆ ಹಾಡಿಯಲ್ಲಿ ಶಾಲೆಯು ಇಲ್ಲದಿರುವುದರಿಂದ ಪ್ರತಿನಿತ್ಯ ಮಕ್ಕಳು ನಡೆದು ಹೋಗಬೇಕಾಗುತ್ತದೆ. ತುರ್ತು ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಸಹ ಬಹಳ ಕಷ್ಟವಿದೆ. ಪೌಷ್ಟಿಕ ಆಹಾರ ಸಾಮಗ್ರಿ ಬರುವ ವಾಹನವು ಸಹ ಸರಿಯಾದ ಸಮಯಕ್ಕೆ ಬರಲು ಆಗುವುದಿಲ್ಲ. ಇದರಿಂದಾಗಿ ಆರೋಗ್ಯ, ಶಿಕ್ಷಣ ಜೊತೆಗೆ ಅವರ ಜೀವನವೇ ಪ್ರತಿನಿತ್ಯ ಸಂಕಷ್ಟದಲ್ಲಿ ಬದುಕುವ ಪರಿಸ್ಥಿತಿ ಇದೆ. ಕನಿಷ್ಠ ರಸ್ತೆ ಸಂಪರ್ಕವನ್ನು ಸಹ ಕಲ್ಪಿಸಲಾಗದ ಸರ್ಕಾರದ ವಿರುದ್ಧ, ಹಾಡಿಯ ಜನರು ಈ ಕೂಡಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಬೇಕೆಂದು ಈ ಮೂಲಕ ದಡದಹಳ್ಳಿ ಹಾಡಿ ಜನರು ಹಾಗೂ ಜನಾಧಿಕಾರ ಸುರಕ್ಷಾ ಸಮಿತಿಯಿಂದ ಆಗ್ರಹಿಸುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಹಾಡಿಯ ಮುಖಂಡರಾದ ನಂಜುಂಡ, ಕಾವ್ಯ, ರೇಖಾ, ಕುಮಾರ, ರಾಜು, ಬೊಮ್ಮ, ದೇವಿ, ಬಸಪ್ಪ, ಬೈರಮ್ಮ, ರಾಜಪ್ಪ, ಶೋಭಾ, ಸೋಮಣ್ಣ, ಭಾಗ್ಯ, ಶಶಿಕಲಾ, ಹಾಗೂ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


