ಕೊಪ್ಪಳ: ಈಗಿನ ಎನ್ ಡಿಎ ಸರಕಾರ ಬಹಳ ದಿನ ಉಳಿಯೋದಿಲ್ಲ. ಇಂಡಿಯಾ ಸರಕಾರ ಬರುವ ಕಾಲ ಹತ್ತಿರವಿದೆ ಎಂದು ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದಿದ್ದಾರೆ. ‘ಸಾಮಾಜಿಕ ಪರಿಕಲ್ಪನೆ, ಡಾ. ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿರುವ ಆಂಧ್ರದ ಚಂದ್ರಬಾಬು ನಾಯ್ಡು, ಬಿಹಾರದ ನಿತೀಶ್ ಕುಮಾರ್ ಇದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ಈಗಿನ ಸರಕಾರ ಬೀಳಬಹುದು.
ಮಮತಾ ಬ್ಯಾನರ್ಜಿ ಸಹ ಈಗ ಸರಕಾರ ಅಸ್ಥಿರತೆಯ ಬಗ್ಗೆ ಹೇಳಿದ್ದಾರೆ. ಅದು ನಿಜವಾಗಬಹುದು’ ಎಂದಿದ್ದಾರೆ. “ಮೂರನೆಯ ಬಾರಿ ಮೋದಿ ಪ್ರಧಾನಿಯಾಗಿದ್ದಾರೆ ಶುಭಾಶಯಗಳು. ನರೇಂದ್ರ ಮೋದಿಯವರಿಗೆ ಕಡಿಮೆ ಸ್ಥಾನ ಬರುತ್ತವೆ ಎಂದು ಮೊದಲೇ ಹೇಳಿದ್ದೆ. ಈಗ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿದೆ. ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಈ ಬಾರಿ ಮೋದಿ ತಪ್ಪು ಮಾಡುವುದಕ್ಕೆ ಬಿಡುವುದಿಲ್ಲ. ರಾಹುಲ್ ಗಾಂಧಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಅಪಹಾಸ್ಯ ಮಾಡಿದ್ದರು” ಎಂದರು.
“ಬಿಜೆಪಿಯವರಿಗೆ ರಾಮ ಹಾಗೂ ಹನುಮ ಶಿಕ್ಷೆ ಕೊಟ್ಟಿದ್ದಾನೆ. ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಅಂಜನಾದ್ರಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಜೆಡಿಎಸ್ ಒಂದು ಟೂರಿಂಗ್ ಟಾಕೀಜ್ ಇದ್ದಂತೆ. ಅವರ ನಾಟಕ ಕಂಪನಿಯ ಬಗ್ಗೆ ಜನ ಅರ್ಥ ಮಾಡಿಕೊಳ್ಳುತ್ತಾರೆ” ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಈಗ ಎಸ್ಐಟಿ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ನಿಗಮದ ಜವಾಬ್ದಾರಿ ನನಗೆ ವಹಿಸಿದರೆ ನಿಭಾಯಿಸುತ್ತೇನೆ” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


