ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಿಂಗ್ರಿ ಸಂಜಪ್ಪ ಕಲ್ಯಾಣ ಮಂಟಪದಲ್ಲಿ ಇಂದು 1800ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. ರಂಗಾಪುರ ಮಠದ ಶ್ರೀ ಗುರುಪರದೇಶಿ ಸ್ವಾಮಿಗಳ ಸಮ್ಮುಖದಲ್ಲಿ ಶಿಬಿರದ ಉದ್ಘಾಟನೆ ನಡೆಯಿತು.
ಸ್ವಾಮೀಜಿಗಳು ಮದ್ಯವ್ಯಸನಿಗಳಿಗೆ ಮಾರ್ಗದರ್ಶನ ನೀಡುತ್ತಾ, “ಸಪ್ತ ವ್ಯಸನಗಳಲ್ಲಿ ಮದ್ಯವ್ಯಸನವೆಂಬುದು ಅತ್ಯಂತ ಅಪಾಯಕಾರಿ ಹಾಗೂ ಕೆಟ್ಟ ವ್ಯಸನವಾಗಿದ್ದು, ಈ ಸಮಾಜವನ್ನು ವ್ಯಸನಮುಕ್ತಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಇಂದಿಗೆ 1800 ನೇ ಹಜ್ಜೆಯನ್ನು ಯಶಸ್ವಿಯಾಗಿಟ್ಟು, ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಕಠಿಣ ಪ್ರಯತ್ನಕ್ಕೆ ಸಾಕ್ಷಿಯಾಗಿದೆ” ಎಂದು ಶುಭ ಹಾರೈಸಿದರು.
ಶಿಬಿರದ ಅದ್ಯಕ್ಷರಾಗಿರುವ ಟಿ.ಸಿ. ತರಕಾರಿ ಗಂಗಾಧರ್ ರವರು ಮಾತನಾಡಿ, “ಯೋಜನೆಯ ವತಿಯಿಂದ ನಡೆಯುತ್ತಿರುವ ಈ ಮಹತ್ವದ ಸೇವೆಗೆ ನನ್ನನ್ನು ಅದ್ಯಕ್ಷರನ್ನಾಗಿ ನೇಮಿಸಿ, ಮಂಜುನಾಥಸ್ವಾಮಿಯ ಹೆಸರಿನಲ್ಲಿ ಬಡಜನರಿಗೆ ಸೇವೆ ಸಲ್ಲಿಸಲು ಒಂದು ಅವಕಾಶವನ್ನು ಕೊಟ್ಟಿರುವುದು, ನನ್ನ ಪುಣ್ಯವೇ ಸರಿ. ಈ ತರಹದ ಯೋಜನೆಯ ಯಾವುದೇ ಕಾರ್ಯಕ್ರಮವಿರಲಿ ನನ್ನ ಬೆಂಬಲ ಸದಾ ಇರುತ್ತದೆ. ಜೊತೆಗೆ ಇಲ್ಲಿರುವ ಎಲ್ಲಾ ಮದ್ಯವಸನಿಗಳು ಪಾನಮುಕ್ತರಾದಾಗ ನಮ್ಮೆಲ್ಲರ ಸೇವೆಗೆ ನಿಜವಾದ ಅರ್ಥ ಸಿಗುತ್ತದೆ” ಎಂದು ಶುಭ ಹಾರೈಸಿದರು.
ತಾಲ್ಲೂಕಿನ ನಗರಸಭಾದ್ಯಕ್ಷರಾದ ರಾಮ್ ಮೋಹನ್ ರವರು ಶಿಬಿರವನ್ನುದ್ದೇಶಿಸಿ, “ಮದ್ಯವ್ಯಸನಿಗಳ ಮನಸ್ಥಿತಿಯನ್ನು ಬದಲಿಸಿ ಪಾನಮುಕ್ತರನ್ನಾಗಿಸಿ, ಅವರ ಕುಟುಂಬಗಳ ಏಳಿಗೆಗೆ ಅವಿರತ ಶ್ರಮಿಸುತ್ತಿರುವ ಯೋಜನೆಗೆ ಹಾಗೂ ಕಾರ್ಯಕರ್ತರಿಗೆ ಶುಭವಾಗಲಿ ಹಾಗೂ ಇಲ್ಲಿರುವ ಎಲ್ಲಾ ಮದ್ಯವ್ಯಸನಿಗಳಿಗೆ ದೇವರು ಒಳ್ಳೆಯದು ಮಾಡಿ ಪಾನಮುಕ್ತರಾಗಲಿ” ಎಂದು ಶುಭ ಹಾರೈಸಿದರು.
ಸಮಾಜ ಸಾಧನೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಯೋಜನೆಯು ಬಡವರ, ನಿರ್ಗತಿಕರ, ಅಶಕ್ತರ ಪರವಾಗಿ ಕಾರ್ಯಕ್ರಮಗಳನ್ನು ಪೂಜ್ಯರ ಆಶಯದಂತೆ ನಡೆಸಿಕೊಂಡು ಬರುತ್ತಿದೆ. ಅವುಗಳಲ್ಲಿ ಈ ಮದ್ಯವರ್ಜನ ಶಿಬಿರವು ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದೆ. ರಾಜ್ಯಾದ್ಯಂತ ಇದುವರೆಗೂ 1799 ಮದ್ಯವವರ್ಜನ ಶಿಭಿರಗಳನ್ನು ನಡೆಸಿ ಸಾವಿರಾರು ಕುಟುಂಬಗಳಿಗೆ, ಇದು ಕೇವಲ ಎಂಟು ದಿನದ ಕಾರ್ಯಕ್ರಮವಲ್ಲ. ಬದಲಾಗಿ ಶಿಬಿರ ಪ್ರಾರಂಭದಿಂದ ಕೊನೆಯವರೆಗೂ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ, ನಂತರದ ನವ ಜೀವನ ಸಮಿತಿಯ ರಚನೆ ಹಾಗೂ ನಿರ್ವಹಣೆ ಮತ್ತು ವಾರ ಹಾಗೂ 15 ದಿನಕ್ಕೊಮ್ಮೆ ಯೋಜನೆಯ ಮಾಹಿತಿ ನೀಡುತ್ತಾ, ಶಿಬಿರದಲ್ಲಿ ಹಾಜರಿದ್ದ 62 ಮದ್ಯ ವ್ಯಸನಿಗಳೆಲ್ಲರೂ ಮದ್ಯಮುಕ್ತರಾಗಿ ಮುಂದೆ ಸಮಾಜ ಗುರುತಿಸುವ ರೀತಿ ಬದಾಲಾವಣೆಯಾಗುವುದು ಶತಸಿದ್ದ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸಂಗಮೇಶ್, ತಿಪಟೂರು ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷರಾದ ಶಶಿಕಿರಣ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಪ್ರತಾಪ್ ಸಿಂಗ್, ಮಲ್ಲಿಗಪ್ಪಾಚಾರ್, ಮಹದೇವಮ್ಮ, ಶ್ರೀಮತಿ ರೇಖ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯನಾಯ್ಕ್, ಶಿಬಿರಾಧಿಕಾರಿಗಳಾದ ದಿವಾಕರ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಹಾಗೂ ಯೋಜನೆಯ ಕಾರ್ಯಕರ್ತರು ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


