ಪಾವಗಡ : ವಿದ್ಯಾರ್ಥಿಗಳಲ್ಲಿ ಕ್ರೀಡಾ ಶಿಸ್ತಿನ ಕೊರತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ತಿಳಿಸಿದರು.
ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಪ್ರೌಢಶಾಲಾ ಹಂತದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಿಸ್ತಿನ ಕೊರತೆ ಕಾಡುತ್ತಿದೆ. ಕೇವಲ ಪಠ್ಯ ವಿಷಯವಷ್ಟೆ ಸಾಲದು. ಮಗುವಿನ ದೈಹಿಕ ಬೆಳವಣಿಗೆಯೂ ಮುಖ್ಯವಾಗಿದೆ. ಕ್ರೀಡಾಕೂಟ ಆರಂಭವಾದ ಗಳಿಗೆಯಿಂದಲೂ ನೋಡುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಾಣುತ್ತಿಲ್ಲ. ಪ್ರತಿಶಾಲೆಯಲ್ಲಿ ಪ್ರತಿಭೆಗಳಿವೆ. ಅವುಗಳಿಗಳಿಗೆ ಅವಕಾಶ ಒದಗಿಸಲೆಂದೇ ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯಾಗುತ್ತಿದೆ. ಅವುಗಳನ್ನು ಬಳಸಿಕೊಂಡು ಮಕ್ಕಳು ಆಟೋಟಗಳ ಜೊತೆಗೆ ಆಂತರಿಕ ಶಿಸ್ತು ಬೆಳೆಸಿಕೊಳ್ಳಬೇಕು. ಅದಕ್ಕೆ ದೈಹಿಕ ಶಿಕ್ಷಕರು ಪೂರಕವಾಗಿ ನಿಲ್ಲಬೇಕು. ಅದಾಗದಿದ್ದಲ್ಲಿ ಕಾಟಾಚಾರದ ಕ್ರೀಡಾಕೂಟಗಳಾಗಿ ಎಲ್ಲವೂ ವ್ಯರ್ಥವಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಂವಾದ ನಡೆಸಿದ ದೈಹಿಕ ಶಿಕ್ಷಕರು, ಆಟೋಟ ತರಗತಿಗಳನ್ನು ಸಹಾ ಓದಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ನಮಗೆ ತರಬೇತಿ ನೀಡಲು ಮತ್ತು ಮಕ್ಕಳು ದೈಹಿಕವಾಗಿ ಬೆಳೆಯಲು ಅವಕಾಶ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವುದು ಕಷ್ಟದ ವಿಷಯ. ದೈಹಿಕ ಶಿಕ್ಷಕರು ಕೇವಲ ಶಾಲಾ ಪ್ರಾರ್ಥನೆ ಮಾಡಿಸುವುದಕಷ್ಟೇ ಸೀಮಿತವಾಗಿರುವಂತ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಮ್ಮ ನೋವನ್ನು ತಿಳಿಸಿದರು.
ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯಲ್ಲಿ ಹತ್ತನೇ ತರಗತಿಯ ಫಲಿತಾಂಶ ಕಡಿಮೆಯಾಗಿರುವುದರಿಂದ ಅದರ ಪ್ರಗತಿಗಾಗಿ ಒತ್ತು ನೀಡಲು ತಿಳಿಸಿದ್ದಾರೆ. ಅದರನ್ವಯ ೧೦ನೇ ತರಗತಿಯ ಮಕ್ಕಳಿಗೆ ಕೆಲವೊಂದು ತರಗತಿಗಳನ್ನು ಬೋಧನೆಗಾಗಿ ಬಳಸಿಕೊಳ್ಳಲು ತಿಳಿಸಲಾಗಿದೆ. ಆದಾಗಿ ಈ ಸಮಸ್ಯೆ ಉದ್ಬವವಾಗಿರಬಹುದು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ದೈಹಿಕ ಶಿಕ್ಷಕರು ಕೇವಲ ಹತ್ತನೇ ತರಗತಿ ಮಾತ್ರವಲ್ಲದೆ ಎಲ್ಲಾ ತರಗತಿಗಳ ಮಕ್ಕಳಿಗೂ ದೈಹಿಕ ಶಿಕ್ಷಣ ತರಗತಿಗಳು ದೊರೆಯದ ಸ್ಥಿತಿ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಸೈಯದ್ ಷಾನವಾಜ್, ಮುಖಂಡರಾದ ಎಸ್.ಟಿ.ನಾಗರಾಜ, ಕೋನೇರಪ್ಪ, ಭಗವಂತಪ್ಪ, ಶಿವಾನಂದಪ್ಪ, ಯೋಗೇಶ್, ಕ್ರೀಡಾಪಟುಗಳಾದ ಅಬ್ದುಲ್ ಶುಕೂರ್, ಇ.ಸಿ.ಓ ಶಿವಮೂರ್ತಿ, ಖಾಜಹುಸೇನ್, ಪಿಡಿಓ ಶ್ರೀರಾಮನಾಯ್ಕ, ಸಿದ್ದಾಪುರ ಮುಖ್ಯಶಿಕ್ಷಕರಾದ ರಾಜಬಾಬು, ರಾಜಣ್ಣ, ಸಂಸ್ಥೆಯ ಕಾರ್ಯದರ್ಶಿ ಆಂಜಿನೇಯಲು, ಐ.ಎ.ನಾರಾಯಣಪ್ಪ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಯತಿಕುಮಾರ್, ಎಲ್ಲಾ ದೈಹಿಕ ಶಿಕ್ಷಕರು ಮತ್ತು ಸಾರ್ವಜನಿಕರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q