ಯಾದಗಿರಿ: ಕೇಂದ್ರ ಸರ್ಕಾರದ ಜಲಜೀವನ ಮಿಷನ್, ಜಲಧಾರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಲಜೀವನ್ ಮಿಷನ್ ಯೋಜನೆಯಡಿ 438 ಕಾಮಗಾರಿಗಳನ್ನು ಪೂರ್ಣಗೊಳಿಸಿ, ಶೇಕಡಾ 63 ರಷ್ಟು ಪ್ರಗತಿ ಸಾಧಿಸಲಾಗಿದೆ. ಅದರಂತೆ ಜಲಧಾರೆ ಯೋಜನೆಯಡಿ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಜಾಕವೆಲ್ ಮತ್ತು ಇತರೆ ಕಾಮಗಾರಿಗಳಲ್ಲಿ 40 ರಷ್ಟು ಪ್ರಗತಿ ಸಾಧಿಸಿದ್ದು ಅಧಿಕಾರಿಗಳು ಇನ್ನೂ ಚುರುಕಾಗಿ ಕಾರ್ಯನಿರ್ವಹಿಸುವ ಮೂಲಕ ಸೂಕ್ತ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ ಗ್ರಾಮ ಸಡಕ್ ಯೋಜನೆ, ಕೃಷಿ ಸಿಂಚನ ಯೋಜನೆ , ಮಕ್ಕಳ ಅಪೌಷ್ಟಿಕತೆ ನಿವಾರಣೆ, ರಸ್ತೆಗಳ ದುರಸ್ತಿ, ಸ್ವಚ್ಛ ಭಾರತ ಮಿಷನ್ ಯೋಜನೆಗಳಲ್ಲಿ ಅವಶ್ಯಕ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.
ಯಾದಗಿರಿ ಜಿಲ್ಲೆ, ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಅತ್ಯಂತ ಹಿಂದೆ ಇದ್ದು, ಫಲಿತಾಂಶ ಹೆಚ್ಚಳಕ್ಕೆ ಸುಧಾರಣಾ ಕ್ರಮಗಳನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಜನರ ಜೀವನಮಟ್ಟ ಸುಧಾರಣೆಯಲ್ಲಿ ಅವಶ್ಯಕ ಗಮನ ನೀಡುವಂತೆಯೂ ಅವರು ಸಲಹೆ ನೀಡಿದರು.
ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ ರೀತಿಯಲ್ಲಿ ಸೂಕ್ಷ್ಮವಾಗಿ ಇರುವುದರಿಂದ ಇದರ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿಯ ಜನರ ಬೇಡಿಕೆಗಳಿಗೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲವು ನಿಂತು ಹೋಗಿರುವಂತಹ ಎಕ್ಸ್ ಪ್ರೆಸ್ ರೈಲುಗಳನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಿಸಲು ಸಲಹೆ ನೀಡಿದ ಅವರು ವೈದ್ಯರಿಗೆ ಸರ್ಕಾರ ತೃಪ್ತಿಕರವಾದ ವೇತನಗಳನ್ನು ನೀಡುತ್ತಿರುವುದರಿಂದ ಬಡವರಿಗೆ ಸಕಾಲಕ್ಕೆ ಸ್ಪಂದಿಸಬೇಕು. ಮಹತ್ವಾಕಾಂಕ್ಷೆ ಜಿಲ್ಲೆಯ ಆಕಾಂಕ್ಷೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯಗಳಿಗೂ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ತಮಗೆ ಸಲ್ಲಿಸಬಹುದಾಗಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಯಾದಗಿರಿ ರೈಲ್ವೆ ಸ್ಟೇಷನ್ ದಲ್ಲಿ ಅಮ್ರಿತ್ ಭಾರತ ಸ್ಟೇಷನ್ ಕಾಮಗಾರಿ ಪರಿಶೀಲಿಸುವರು.ಅದರಂತೆ ಯಾದಗಿರಿ—ವಾಡಿ—ವಿಕಾರಾಬಾದ್– ಸಿಕಂದರಾಬಾದ್ ರೈಲು ಸೆಕ್ಷನ್ ವಿಂಡೋ ಟ್ರೆಲಿಂಗ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q