ಇತ್ತೀಚೆಗೆ ರಾಜ್ಯದಲ್ಲಿ ನಡೆದಂತಹ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ನೌಕರರು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಕೆಲವು ದಿನ ಹೋರಾಟ ಮಾಡಿದ್ದು ಕೇಳಿ ಬಂತು, ಸರ್ಕಾರ ಸಹಾ ಇವರ ಹೋರಾಟಕ್ಕೆ ಸ್ಪಂದನೆ ನೀಡಿತ್ತು. ಅದೇ ಜನ ಸಾಮಾನ್ಯರು ರೈತರು ಹೋರಾಟ ಮಾಡುವ ಸಂದರ್ಭದಲ್ಲಿ ಎಷ್ಟೊ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ನೌಕರರಲ್ಲಿ ಸಂಘಟನೆಗಳು ಬಲಾಢ್ಯ ಆಗಿರುತ್ತದೆ. ಆದರೆ ಜನಸಾಮಾನ್ಯರು ರೈತರ ಸಂಘಟನೆಗಳ ಕೊರತೆ ಇದೆ, ಬಲಿಷ್ಟವಾಗಿ ಇಲ್ಲ ಈ ಕಾರಣದಿಂದ ಯಶಸ್ಸು ಕಾಣುವುದಿಲ್ಲ. ಚುನಾವಣೆಗಳ ಸಂದರ್ಭದಲ್ಲಿ ರೈತರು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ಮೊಸಳೆ ಕಣ್ಣಿರು ಸುರಿಸುವುದು ಇದೆ. ಅದೇ ಸರ್ಕಾರಿ ನೌಕರರು ಸಂಘಟನೆಗಳ ಹೋರಾಟ ಮಾಡಿದರೆ ಬೆಂಬಲಕ್ಕೆ ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ನೇರವಾಗಿ ಬೆಂಬಲ ನೀಡುತ್ತಾರೆ.
ಈ ಸಂಘಟನೆಯಲ್ಲಿ ಪ್ರಸ್ತಾಪ ಒಂದು ಕೇಳಿ ಬಂತು. ವರ್ಗಾವಣೆ ವಿಷಯದಲ್ಲಿ ಬಡ್ತಿ ಮೂಲಕ ಬೇರೆ ತಾಲ್ಲೂಕ್ ಗಳಿಗೆ ವರ್ಗಾವಣೆ ಮಾಡಬಾರದು ಎಂದೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮನವಿಯಲ್ಲಿ ಇತ್ತು, ಆದರೆ ಇಲ್ಲಿ ವಿಷಯ ಅಧಿಕಾರಿಗಳು ತಾವು ಮಾಡುವ ತಪ್ಪುಗಳ ರಕ್ಷಣೆಗೆ ಅದೇ ತಾಲ್ಲೂಕ್ ನಲ್ಲಿ ಇದ್ದರೆ ರಾಜಕಾರಣಿಗಳ ಒಡನಾಟ ಇರುವ ಕಾರಣ ರಕ್ಷಣೆ ಸಿಗುತ್ತದೆ ಎಂಬ ಕಾರಣದಿಂದ ಇದು ಪ್ರಸ್ತಾಪ ಆಗಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. ಪ್ರಾಮಾಣಿಕ ಅಧಿಕಾರಿಗಳಿಗೆ ಯಾವ ತಾಲ್ಲೂಕ್ ಹಾಕಿದರು ತಮ್ಮ ಕರ್ತವ್ಯ ಮಾಡುತ್ತಾರೆ. ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ, ಆದರೆ ವಿರಳ. ಇತರೆ ಕೆಲವು ವಿಷಯಗಳು ತಮ್ಮ ಸಮಸ್ಯೆಗಳ ಬಗ್ಗೆ ಬಡ್ತಿ ಸಂಬಂಧಪಟ್ಟಂತೆ ಅಧಿಕಾರಿಗಳು ಬೇಡಿಕೆ ಸಲ್ಲುಸುವುದು ತಪ್ಪಿಲ್ಲ.
ಇನ್ನೊಂದು ವಿಷಯ ಏನೆಂದರೆ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಅಕ್ರಮಗಳಿಗೆ ಅಧಿಕಾರಿಗಳಿಗೆ ಮಾತ್ರ ಹೊಣೆ ಮಾಡಬಾರದು, ಅಧ್ಯಕ್ಷರು ಹಾಗೂ ಸದಸ್ಯರನ್ನು (ಜನಪ್ರತಿನಿಧಿಗಳು) ಸಹಾ ಹೊಣೆ ಮಾಡಬೇಕೆಂಬ ಬೇಡಿಕೆ ಪ್ರಸ್ತಾಪ ಆಗಿದೆ ಎನ್ನಲಾಗಿದೆ. ಈ ಮಾಹಿತಿ ಅಸ್ಪಷ್ಟ. ಆದರೂ, ವಿಶ್ಲೇಷಣೆ ಮಾಡಬಹುದು. ವಿಷಯ ಏನೆಂದರೆ ಪಂಚಾಯತ್ತಿ ಅಭಿವೃದ್ಧಿ ಅಧಿಕಾರಿಗಳು ಪದವಿ, ಉನ್ನತ ಪದವಿ (ಮಾಸ್ಟರ್ ಡಿಗ್ರಿಗಳು) ಪಡೆದವರು ಆಗಿ ಪರೀಕ್ಷೆಗಳಲ್ಲಿ ತಮ್ಮ ಪ್ರತಿಭೆಯಿಂದ ಆಯ್ಕೆ ಆಗಿರುತ್ತಾರೆ. ಇವರಿಗೆ ಗ್ರಾಮ ಪಂಚಾಯತಿಗಳ ಬೈಲ್ ಹಾಗೂ ಇತರೆ ವಿಷಯಗಳಲೂ ಹೆಚ್ಚು ಮಾಹಿತಿಗಳನ್ನು ಪಡೆದುಕೊಂಡು ಇರುತ್ತಾರೆ, ಇವರು ತಮ್ಮ ಪ್ರತಿಭೆಯನ್ನು ಗ್ರಾಮಗಳ ಅಭಿವೃದ್ಧಿಗೆ ಕಾಳಜಿ ವಹಿಸಿ ಕರ್ತವ್ಯ ಮಾಡಿದ್ದರೆ ಸಮಸ್ಯೆಗಳೇ ಇರುವುದಿಲ್ಲ, ಆದರೆ ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಕರ್ತವ್ಯ ಮಾಡುವರು ಕಡಿಮೆ ಎಂಬುದು ನಾಗರಿಕರ ಅನಿಸಿಕೆ. ಹೆಚ್ಚಿನದಾಗಿ ತಮ್ಮ ಸ್ವಾರ್ಥಕ್ಕಾಗಿ ಗ್ರಾಮ ಪಂಚಾಯತಿಗಳ ಅನುದಾನಗಳನ್ನು ನರೇಗಾ ಯೋಜನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದು ಹೆಚ್ಚು. ತಮ್ಮ ಪ್ರತಿಭೆ ಮುಖಾಂತರ ಹೆಚ್ಚಿನದಾಗಿ ಹಗರಣಗಳನ್ನು ಮಾಡಿದರು ನುಣಚಿಕೊಳ್ಳವ ಕೈಚಳಕವನ್ನು ತೋರುವವರೇ ಹೆಚ್ಚು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಗ್ರಾಮ ಪಂಚಾಯತ್ತಿಗಳಿಗೆ ಆಯ್ಕೆ ಆಗುವ ಸದಸ್ಯರಲ್ಲಿ ಅನಕ್ಷರಸ್ಥರು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಮಾಡಿದವರು ಮಾತ್ರ ಬರುತ್ತಾರೆ. ಪದವಿ ಮಾಡಿದವರು ಆಯ್ಕೆ ಆಗುವುದು ಅಪರೂಪ (ರಾಜಧಾನಿ ಹಾಗೂ ಜಿಲ್ಲಾ ನಗರಗಳ ಸೇರಿಕೊಂಡಂತೆ ಇರುವ ಗ್ರಾಮ ಪಂಚಾಯತ್ತಿಗಳಲ್ಲಿ ಪದವಿ ಪಡೆದವರು ಇರಬಹುದು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಪದವಿ ಪಡೆದವರು ಸದಸ್ಯರು ಕಡಿಮೆ)ಇಂತ ಸಂದರ್ಭದಲ್ಲಿ ಪಂಚಾಯತಿಗೆ ಬರುವ ಸದಸ್ಯರಲ್ಲಿ ಗ್ರಾಮ ಪಂಚಾಯತ್ತಿ ಬೈಲ್ ಗಳು ಹಾಗೂ ಅನುದಾನಗಳ ಮಾಹಿತಿ ಕೊರತೆ ಇರುತ್ತದೆ. ಇಂತ ಸಂದರ್ಭದಲ್ಲಿಅಧಿಕಾರಿಗಳು ಇವರನ್ನು ಯಾಮರಿಸುವುದು ಹೆಚ್ಚು ಎಂಬ ಮಾತುಗಳು ಕೇಳಿ ಬರುತ್ತದೆ.
ಅದು ಅಲ್ಲದೆ ಗ್ರಾಮ ಪಂಚಾಯತ್ ಸದಸ್ಯರಿಗೂ ಸರ್ಕಾರದ ಕೆಲವು ಅನುದಾನ ಬಗ್ಗೆ ಹಾಗೂ ಕೆಲವು ಮಾಹಿತಿಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಾ ಮಾಹಿತಿಗಳನ್ನು ಬಿಟ್ಟು ಕೊಡುವುದಿಲ್ಲ ಅಂದ ಮೇಲೆ ಸಾರ್ವಜನಿಕರಿಗೆ ಪಂಚಾಯತಿ ಮಾಹಿತಿಗಳು ಹೇಗೆ ದೊರೆಯಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತದೆ.
ಇನ್ನೊಂದು ವಿಷಯ ಏನೆಂದರೆ, ಪಂಚಾಯತ್ ಗಳಲ್ಲಿ ಅಧ್ಯಕ್ಷರು ಸ್ಥಾನಮಾನ ಏನು ಎಂಬ ಬಗ್ಗೆ ತಿಳಿಯಬೇಕಾದರೆ ಅಧ್ಯಕ್ಷರ ಚೇಂಬರ್ ನೋಡಿದರೆ ಗೊತ್ತಾಗುತ್ತದೆ, ಕೆಲ ಅಧ್ಯಕ್ಷರು ನೆಪಮಾತ್ರಕ್ಕೆ ಎಂಬುವಂತೆ ಇರುತ್ತಾರೆ. ಒಂದು ಪ೦ಚಾಯತ್ತಿಗೆ ಒಬ್ಬರೊ ಇಬ್ಬರೊ ಮಾತ್ರ ಪಂಚಾಯತ್ ನ ಮಾಹಿತಿಗಳು ತಿಳಿದಿರಲೂ ಸಾಧ್ಯ ಎಂಬ ಮಾತುಗಳು ಪ್ರಜ್ಞಾವಂತರರಿಂದ ಕೇಳಿ ಬರುತ್ತದೆ, ಇದೆಲ್ಲಾ ಗಮನಿಸಿದರೆ ಪಂಚಾಯತ್ತಿಗಳಲ್ಲಿ ಅಧಿಕಾರಿಗಳೇ ಸುಪ್ರಿಮ್ ಎಂಬುದು ತಿಳಿಯಬಹುದು. ಇಂತ ಸಂದರ್ಭದಲ್ಲಿ ಹಗರಣಗಳಲ್ಲಿ ಜನಪ್ರತಿನಿಧಿಗಳನ್ನು ಹೊಣೆಗಾರರು ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬಂದಿದೆ.
ಗ್ರಾಮ ಪಂಚಾಯತ್ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸದಸ್ಯರ ಗಮನಕ್ಕೆ ಬರುವುದಿಲ್ಲ ಮಾತನಾಡುವುದು ಒಂದು ಆದರೆ, ಲಿಖಿತ ರೂಪ ಬೇರೆ ಇರುತ್ತದೆ ಎಂದೂ ಮಾಜಿ ಸದಸ್ಯರು ಹೇಳುವುದು ಇದೆ. ಸಭೆಗಳಲ್ಲಿ ನಡೆಸುವಾಗ ಮೊದಲೆ ತಮ್ಮ ಫೈಲ್ ಅಥವಾ ನೋಟ್ ಬುಕ್ ಗಳಿಗೆ ಸದಸ್ಯರಿಂದ ಸಹಿ ಮಾಡಿಸಿಕೊಳ್ಳುತ್ತಾರೆ. ಸಭೆ ಆದ ನಂತರ ತಮಗೆ ಅನುಕೂಲವಾಗುವ ನಿರ್ಣಯಗಳನ್ನು ಬರೆದುಕೊಳ್ಳುತ್ತಾರೆ. ಸದಸ್ಯರಿಗೆ ಈ ಮಾಹಿತಿ ಇರುವುದಿಲ್ಲ ಎಂದೂ ಮಾಜಿ ಸದಸ್ಯರು ಹೇಳುತ್ತಾರೆ. ಪಂಚಾಯತಿ ಅಧ್ಯಕ್ಷರು ವಿದ್ಯಾವಂತರು ಆಗಿದ್ದರೆ ಮಾತ್ರ ನಿರ್ಣಯಗಳನ್ನು ಓದಿ ಸಹಿ ಹಾಕುತ್ತಾರೆ. ಶಿಕ್ಷಣ ಇಲ್ಲದವರು ಯಾವುದೇ ಮಾಹಿತಿಯ ಪರಿವೇ ಇಲ್ಲದೇ ಸಹಿ ಹಾಕುತ್ತಾರೆ. ಇಂತ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಅಕ್ರಮಗಳಿಗೆ ಹೊಣೆ ಮಾಡಿದರೆ ಹೇಗೆ ? ಎಂಬ ಅನಿಸಿಕೆಗಳು ಶಿಕ್ಷಣ ಹೊಂದಿರುವ ಮಾಜಿ ಸದಸ್ಯರಿಂದ ಕೇಳಿ ಬರುತ್ತವೆ. ಇನ್ನು ಮುಂದುವರೆಸಿ ಗ್ರಾಮ ಪಂಚಾಯತ್ ಗಳಲ್ಲಿ ವಾರ್ಷಿಕ ಅಡಿಟ್ ಗಳನ್ನು ಹಾಗೂ ನರೇಗಾ ವಾರ್ಷಿಕ ಮಾಹಿತಿಯನ್ನು ಎಷ್ಟು ಸದಸ್ಯರು ಓದಿರುತ್ತಾರೆ ಎನ್ನುವುದೂ ಮುಖ್ಯವಾಗಿದೆ.
ಇನ್ನು ಗ್ರಾಮಗಳ ನಾಗರಿಕರಿಗೆ ಅಂತೂ ಗ್ರಾಮಪಂಚಾಯತ್ ಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳೇ ತಿಳಿದಿರುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳ ಮಾಹಿತಿ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ತಿಳಿಯಬಹುದು. ಆದರೆ ಗ್ರಾಮ ಪಂಚಾಯತ್ ನಲ್ಲಿ ನಡೆಯುವ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಾಯಗಳು ಗ್ರಾಮಸ್ಥರಿಗೆ ತಿಳಿದಿರುವುದಿಲ್ಲ ಆದ ಕಾರಣ ಸಭೆಯ ನಿರ್ಣಯಗಳು ಸೂಚನ ಫಲಕಗಳಿಗೆ ಹಾಕಬೇಕು, ಮತ್ತೊಂದು ಸಭೆವರೆಗೂ ಈ ಮಾಹಿತಿಗಳು ನಾಗರಿಕರಿಗೆ ಲಭ್ಯ ಇರಬೇಕು ಎನ್ನುವ ಒತ್ತಾಯಗಳು ಕೂಡ ಇವೆ.
ಕೆಲ ಮಾಜಿ ಸದಸ್ಯರು ಹೇಳುವುದು ಏನೆಂದರೆ ಗ್ರಾಮ ಪಂಚಾಯತಿ ಸದಸ್ಯರ ಸಭೆಗಳು ತಿಂಗಳಿಗೆ ಒಮ್ಮೆ ನಡೆಸಬೇಕು. ಆದರೆ ಈ ರೀತಿಯ ಸಭೆಗಳನ್ನು ನಡೆಸುವುದಿಲ್ಲ ಮುಖ್ಯ ಸೂತ್ರಧಾರಿಗಳು ಅಧಿಕಾರಿಗಳು ಆಗಿರುತ್ತಾರೆ. ಸದಸ್ಯರು ಲಾಭ ಮಾಡಿಕೊಳ್ಳಲು ಕಾಮಗಾರಿಗಳು ಹಾಕಿ ಅವರು ಪ್ರಶ್ನೆ ಮಾಡದಂತೆ ನೋಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ. ಗ್ರಾಮ ಪಂಚಾಯತಿಗಳಿಗೆ ಬರುವ ಅನುದಾನ ಸರಿಯಾಗಿ ಬಳಕೆಯಾದರೆ ಗ್ರಾಮಗಳನ್ನು 5 ವರ್ಷದಲ್ಲಿಯೇ ಮಾದರಿ ಗ್ರಾಮಗಳನ್ನಾಗಿ ಮಾಡಬಹುದು.
N.S. ಈಶ್ವರಪ್ರಸಾದ್.
ನೇರಳೇಕೆರೆ, ಮಧುಗಿರಿ ತಾಲ್ಲೂಕ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx