ಒಂದು ಊರಿನಲ್ಲಿ ಒಬ್ಬ ರಾಜನು, ಮಂತ್ರಿಯನ್ನು ಕರೆದು ರಾಜ್ಯದಲ್ಲಿ ನಿಜವಾದ ದಾನಿ ಯಾರೆಂದು ಗುರುತಿಸಿ ಅವರಿಗೆ ಬಹು ಮೌಲ್ಯದ ಬಹುಮಾನ ಕೊಡಲಾಗುವುದೆಂದು ಡಂಗುರ ಸಾರಿಸಿದನು. ಅದಕ್ಕಾಗಿ ಒಂದು ದಿನ ನಿಗದಿ ಮಾಡಿ ಹಲವು ರಾಜ ಭಟರನ್ನು ರಾಜ್ಯದಲ್ಲೆಲ್ಲಾ ಗಸ್ತು ತಿರುಗುತ್ತಾ ನಿಜವಾದ ದಾನಿಯನ್ನು ಪತ್ತೆ ಮಾಡುವ ಕಾರ್ಯ ವಹಿಸಿದನು. ಇದರ ಮುಂದಾಳತ್ವ ಮತ್ತು ಜವಾಬ್ದಾರಿಯನ್ನು ಮಂತ್ರಿಗೆ ವಹಿಸಿದನು. ಹಲವು ಶ್ರೀಮಂತರು ಅತಿ ಶ್ರೀಮಂತರು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳನ್ನು ಯಥೇಚ್ಛವಾಗಿ ದಾನ ಮಾಡಿದರೆ, ಮತ್ತೆ ಕೆಲವು ಶ್ರೀಮಂತರು ಸಾರ್ವಜನಿಕ ಭೋಜನ ವಿತರಣೆಯಂತಹ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡತೊಡಗಿದರು, ಮತ್ತೆ ಕೆಲವರು ಭೂದಾನಗಳನ್ನೂ ಮಾಡಿದರು. ಅಂದು ರಾಜ್ಯದಲ್ಲೆಲ್ಲಾ ದಾನ ಧರ್ಮಗಳದೇ ಕಾರುಬಾರು. ಇವೆಲ್ಲವನ್ನು ಯಾರು ಹೆಚ್ಚು ಯಾರು ಕಡಿಮೆ ಎಂಬ ಲೆಕ್ಕಾಚಾರವನ್ನೆಲ್ಲಾ ರಾಜಭಟರು ಬರೆದುಕೊಳ್ಳುತ್ತಿದ್ದರು.
ಅಂದು ಸಾಯಂಕಾಲ ಕಾರ್ಯಕ್ರಮದ ಅವಧಿ ಮುಗಿಯುತು. ಮಂತ್ರಿ, ರಾಜಭಟರು ಮತ್ತು ದಾನ ಮಾಡಿದ ಎಲ್ಲ ಶ್ರೀಮಂತರು ನಿಯೋಜಿಸಿದ್ದ ಅರಮನೆಯ ಮೈದಾನಕ್ಕೆ ಬಂದರು. ಎಲ್ಲರಿಗೂ ಒಂದೇ ಕುತೂಹಲ ಯಾರು ಮಹಾ ದಾನಿ ಎಂದು ಮತ್ತು ಯಾರಿಗೆ ಬಹುಮೌಲ್ಯದ ಬಹುಮಾನ ಸಿಗುವುದು ಎಂದು. ರಾಜನು ಮಂತ್ರಿಯನ್ನು ಕರೆದು ಈಗ ಹೇಳಿಬಿಡಿ ಮಂತ್ರಿಗಳೇ ನಿಜವಾದ ದಾನಿ ಯಾರೆಂದು ಎಂದಾಗ ಮಂತ್ರಿಯು ಒಬ್ಬ ವ್ಯಕ್ತಿಯನ್ನು ಸಭಾಂಗಣದ ಮುಂದೆ ತಂದು ಅವನಿಗೆ ಮುಚ್ಚಿದ್ದ ಬಿಳಿಯ ವಸ್ತ್ರವನ್ನು ತೆಗೆದಾಗ ಅವನೊಬ್ಬ ಹರಕಲು ಬಟ್ಟೆ ಹಾಕಿಕೊಂಡಿದ್ದ ಭಿಕ್ಷುಕ ಮತ್ತು ನಿರ್ಗತಿಕನಾಗಿದ್ದನು. ಎಲ್ಲರೂ ಅವನನ್ನು ನೋಡುತ್ತಲೇ ಈ ಮಂತ್ರಿಗೆ ತಲೆ ಕೆಟ್ಟಿದೆ ಇದು ಹೇಗೆ ಸಾಧ್ಯ ನಾವೆಲ್ಲ ಅಷ್ಟೊಂದು ದಾನ ಮಾಡಿದ್ದೇವೆ ಎಂದು ಅಂದುಕೊಳ್ಳುತ್ತಿರುವಾಗಲೇ ರಾಜನು ಇದೇನು ಮಂತ್ರಿಗಳೇ ಈ ವ್ಯಕ್ತಿಯೇ ನಿಜವಾದ ದಾನಿ ವಿವರಣೆ ಕೊಡಿ ಎಂದಾಗ, ಮಂತ್ರಿಯು ಹೌದು ಪ್ರಭು ಇವನ ಹೆಸರು ಗುಣಸಾಗರ ಇವನು ನಿರ್ಗತಿಕ ಸೋಮನಾಥಪುರದಲ್ಲಿ ಶ್ರೀಮಂತರು ಅನ್ನ ದಾಸೋಹವನ್ನೇ ನಡೆಸುತ್ತಿದ್ದರು. ಆದರೆ ಈತ ಅಲ್ಲಿಗೆ ಹೋಗದೆ ಅಲ್ಲಿಯ ಒಬ್ಬ ಶ್ರೀಮಂತನ ಮನೆಗೆ ಹೋಗಿ ನೋಡಿ ಸ್ವಾಮಿ ನನಗೆ ಪುಕ್ಕಟೆ ಊಟ ಬೇಡ ನನಗೊಂದು ಈ ದಿನದ ಮಟ್ಟಿಗೆ ಕೆಲಸ ಕೊಡಿ ವೇತನಕ್ಕೆ ಬದಲಾಗಿ ಊಟ ಕೊಡಿ ಎಂದು ಕೇಳಿಕೊಂಡ ಅದರಂತೆ ಶ್ರೀಮಂತ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಲದಲ್ಲಿ ಕೆಲಸ ಕೊಟ್ಟು ಊಟದ ಸಮಯದಲ್ಲಿ ಒಂದು ಬುತ್ತಿಯ ತುಂಬ ಊಟ ಕೊಟ್ಟರು. ಈತ ಅದನ್ನು ತೆಗೆದುಕೊಂಡು ಒಂದು ಮರದ ನೆರಳಿನಲ್ಲಿ ಕುಳಿತು ಬುತ್ತಿ ತೆಗೆದು ಇನ್ನೇನು ಊಟ ಶುರುಮಾಡುವಷ್ಟರಲ್ಲಿ ಮತ್ತೊಬ್ಬ ಭಿಕ್ಷುಕ ಮುದುಕ ಇವನ ಹತ್ತಿ ಬಂದು ನನಗೂ ಸ್ವಲ್ಪ ಊಟ ಕೊಡುವೆಯಾ ಅಲ್ಲಿ ದಾಸೋಹ ಮುಗಿದಿದೆ ಎಂದಾಗ ಹಿಂದು ಮುಂದು ಯೋಚಿಸದೇ ತೆಗೆದುಕೊಳ್ಳಿ, ನನಗೆ ಇನ್ನೂ ಕೆಲಸ ಮಾಡುವ ಚೈತನ್ಯವಿದೆ ನೀವು ಹೊಟ್ಟೆ ತುಂಬ ಊಟ ಮಾಡಿ ಎಂದು ತನ್ನ ಕೈಲಿದ್ದ ಬುತ್ತಿಯನ್ನು ಆ ಮುದುಕನಿಗೆ ಕೊಟ್ಟು ಮತ್ತೆ ಕೆಲಸಕ್ಕೆ ಸಿದ್ಧನಾದನು. ಈಗ ಹೇಳಿ ಪ್ರಭು ಎಷ್ಟೇ ದಾನ ನೀಡಿದರೂ ಕರಗದ ಈ ಶ್ರೀಮಂತರು ದಾನಿಗಳೋ ಅಥವಾ ಒಂದು ಹೊತ್ತಿನ ಊಟಕ್ಕಾಗಿ ಉಚಿತವಾಗಿ ಏನನ್ನು ಬಯಸದೆ ಸ್ವಾಭಿಮಾನದಿಂದ ದುಡಿದು, ಬಂದಿದ್ದರಲ್ಲಿ ತನಗೆ ಸ್ವಲ್ಪವೂ ಇಟ್ಟುಕೊಳ್ಳದೇ ಎಲ್ಲವನ್ನೂ ದಾನ ನೀಡಿದ ಈ ಗುಣಸಾಗರನು ನಿಜವಾದ ದಾನಿಯೋ ಎಂದಾಗ ರಾಜನಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು, ಗುಣಸಾಗರನಿಗೆ ಅರಮನೆಯಲ್ಲಿಯೇ ಒಂದು ಕೆಲಸ ಕೊಟ್ಟು ರಾಜನು ಸನ್ಮಾನ ಮಾಡಿದನು.
ನೀತಿ: ಒಂದು ಉತ್ತಮ ಸಂಸ್ಕಾರ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಸಂಪಾದಕರ ನುಡಿ
ಸತ್ಯ, ಪರೋಪಕಾರ, ಮತ್ತು ಮಾನವೀಯತೆ ಎಂಬುವುವ ಸಮಾಜವನ್ನು ಮಾರ್ಗದರ್ಶನ ಮಾಡಬಲ್ಲ ಅಮೂಲ್ಯ ಗುಣಗಳಾಗಿವೆ. ನಮ್ಮ “ನಿಜವಾದ ದಾನಿ” ಎಂಬ ಈ ದಿನದ ಕಥೆ ದಾನವು ಕೇವಲ ಸಂಪತ್ತನ್ನು ಹಂಚಿಕೊಳ್ಳುವುದಲ್ಲ, ಆದರೆ ಅದು ನಿಸ್ವಾರ್ಥತೆ ಮತ್ತು ಹೃದಯಪೂರ್ವಕ ಬಲಿದಾನದ ಸಂಕೇತವೆಂಬುದನ್ನು ತೋರಿಸುತ್ತದೆ.
ಸಮಾಜದಲ್ಲಿ ಹಲವರು ದೊಡ್ಡ ಮೊತ್ತದ ಹಣ, ಭೂಮಿ, ಮತ್ತು ಧನ್ಯಾವಾಲಿಗಳನ್ನು ದಾನವಾಗಿ ನೀಡುವ ಮೂಲಕ ತಮ್ಮ ಧಾರ್ಮಿಕ ಅಥವಾ ಸಾಮಾಜಿಕ ಕರ್ತವ್ಯವನ್ನು ನೆರವೇರಿಸುತ್ತಾರೆ. ಆದರೆ, ಹೃದಯದಿಂದ ಮಾಡಿದ ತ್ಯಾಗ ಮತ್ತು ಸತ್ಯದ ಚಿಂತನೆಯೇ ನಿಜವಾದ ದಾನ. ಈ ಕಥೆಯ ನಾಯಕ ಗುಣಸಾಗರ, ತನ್ನ ಒಬ್ಬನೇ ಹೊತ್ತಿನ ಊಟವನ್ನು ಬೇರೊಬ್ಬ ಹಸಿದಾತಿಗೆ ನೀಡುವ ಮೂಲಕ ನಿಜವಾದ ಪರೋಪಕಾರವನ್ನು ತೋರಿಸುತ್ತಾನೆ. ಇದು ನಮಗೆ ಸಿಕ್ಕಿದನ್ನು ಇತರರೊಂದಿಗೆ ಹಂಚಿಕೊಳ್ಳುವ ದೊಡ್ಡ ಪಾಠವನ್ನು ಕಲಿಸುತ್ತದೆ.
ನಮ್ಮ ಜೀವನದಲ್ಲೂ ನಾವು ಸಮಾಜದ ಒಳಿತು ಮತ್ತು ಬೇರೆಯವರ ಸಮೃದ್ಧಿಗಾಗಿ ಕೆಲಸ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಜವಾದ ಸಂತೃಪ್ತಿಯು ಕೇವಲ ಪಡೆಯುವುದರಿಂದ ಅಲ್ಲ, ಆದರೆ ಕೊಡುವುದರಿಂದ ಲಭಿಸುತ್ತದೆ.
— ಜಿ.ಎಲ್. ನಟರಾಜು
ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4