ಒಂದು ರಾಜ್ಯದಲ್ಲಿ ಅರಿಸೇನನೆಂಬ ರಾಜನಿದ್ದನು. ಅವನಿಗೆ ತಾನು ಹಿಂದಿನ ಜನ್ಮದಲ್ಲಿ ಏನು ಆಗಿದ್ದೆ ಎಂದು ತಿಳಿಯುವ ಕುತೂಹಲ ಉಂಟಾಯಿತು. ಅದಕ್ಕಾಗಿ ತುಂಬಾ ದೊಡ್ಡ ಹೆಸರು ಮಾಡಿದ್ದ ದೊಡ್ಡ ದೊಡ್ಡ ಭವಿಷ್ಯಕಾರರನ್ನು ಅರಮನೆಗೆ ಕರೆಯಿಸಿ ತಾವೆಲ್ಲರೂ ಒಮ್ಮತದ ಅಭಿಪ್ರಾಯದಿಂದ ನಾನು ಹಿಂದಿನ ಜನುಮದಲ್ಲಿ ಏನಾಗಿದ್ದೆ ಸಾಕ್ಷಿ. ಸಮೇತ ತಿಳಿಸಿದರೆ 10 ಸಹಸ್ರ ಸ್ವರ್ಣ ಮುದ್ರಿಕೆ ನೀಡಲಾಗುವುದು ಎಂದು ತಿಳಿಸಿದ.
ರಾಜನ ಜನ್ಮ ಕುಂಡಲಿ ತೆಗೆದು ನೋಡಿದರು, ಅವರವರಲ್ಲೇ ಚರ್ಚೆ ಉಂಟಾಯಿತು, ಲೆಕ್ಕಾಚಾರ ಮಾಡಿ, ಎಲ್ಲರೂ ಅವರವರದ್ದೇ ವಾದಮಂಡಿಸಿ ತಮ್ಮ ತಮ್ಮ ವಿದ್ವತ್ತನ್ನು ಕಾಪಾಡಿಕೊಳ್ಳುವಲ್ಲಿ ಮುಂದಾದರು, ಯಾರು ಯಾರೊಬ್ಬರ ವಾದ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ, ಅವರಿಗೆ ಅವರ ಮರ್ಯಾದೆ ಸ್ವಾಭಿಮಾನವೇ ಮುಖ್ಯವಾಗಿತ್ತು.
ಹಾಗೆಯೇ ಯಾರೂ ಒಮ್ಮತದ ಅಭಿಪ್ರಾಯಕ್ಕೆ ಬರಲಿಲ್ಲ. ಕೊನೆಗೆ ಮೊದಲನೇ ಭವಿಷ್ಯಕ ಎದ್ದು ನಿಂತು ಮಹಾರಾಜರೇ ತಾವು ಹಿಂದಿನ ಜನುಮದಲ್ಲಿ ಕಾಡನಾಳುವ ಸಿಂಹವಾಗಿದ್ದಿರಿ, ಆದ್ದರಿಂದಲೇ ಈ ಜನುಮದಲ್ಲಿ ರಾಜರಾಗಿದ್ದೀರಿ ಎಂದರೆ, ಮತ್ತೊಬ್ಬ ಭವಿಷ್ಯಕ ಇಲ್ಲ ರಾಜರೇ ನೀವು ಅತ್ಯಂತ ನಿರ್ಗತಿಕರಾಗಿದ್ದೀರಿ ಮತ್ತು ದೈವ ಭಕ್ತರಾಗಿದ್ದಿರಿ ಅದಕ್ಕಾಗೇ ದೇವರು ಈ ಜನುಮದಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆ ಎಂದರೆ, ಮತ್ತೊಬ್ಬ ರಾಜರೇ ನೀವು ಸ್ವತಃ ರಾಜರೇ ಆಗಿ ಧರ್ಮ ಕಾರ್ಯಗಳನ್ನು ಮಾಡಿ ಒಳ್ಳೆಯ ಕರ್ಮ ಫಲ ಪಡೆದಿದ್ದಕ್ಕೆ ಈ ಜನುಮದಲ್ಲೂ ರಾಜರೇ ಆಗಿದ್ದೀರಿ ಎಂದರೆ, ಮತ್ತೊಬ್ಬರು ಇದಾವುದೂ ಅಲ್ಲ ರಾಜರೇ ನೀವು ಎಲ್ಲರಂತೆ ಸಾಮಾನ್ಯ ಮನುಷ್ಯರಾಗಿದ್ದಿರಿ. ಸಾಯುವವರೆಗೆ ಕಷ್ಟಪಟ್ಟು ಎಲ್ಲವನ್ನೂ ಸಂಪಾದಿಸಿ ಒಂದು ಕಡೆ ಶೇಖರಿಸಿದ್ದಿರಿ ಅದನ್ನು ಅನುಭವಿಸುವ ಹೊತ್ತಿಗೆ ನಿಮಗೆ ಮರಣ ಸಂಭವಿಸಿತ್ತು. ಅದಕ್ಕಾಗಿ ದೇವರು ಈ ಜನುಮದಲ್ಲಿ ಮತ್ತೆ ನೀವು ಸಂಪಾದಿಸಿದ್ದನ್ನು ನಿಮಗೇ ಅನುಭವಿಸಲು ನೀಡಿದ್ದಾನೆ ಎಂದನು.
ಮತ್ತೊಬ್ಬರು ಇಲ್ಲ ರಾಜರೇ ನಾನು ಸರಿಯಾಗೆ ಹೇಳುತ್ತೇನೆ, ನೀವು ಹಿಂದಿನ ಜನುಮದಲ್ಲಿ ಕತ್ತೆಯಾಗಿದ್ದಿರಿ, ಸರಿಯಾಗಿ ಕೆಲಸ ಮಾಡದ ಕಾರಣ ಈ ಜನುಮದಲ್ಲಿ ಎಲ್ಲರ ಸೇವೆ ಮಾಡುವ ರಾಜನಾದಿರಿ ಎಂದರು. ರಾಜನಿಗೆ ಇದು ಯಾವ ಉತ್ತರವೂ ಇಷ್ಟವಾಗಲಿಲ್ಲ, ಕೊನೆಗೆ ಒಮ್ಮತದ ಅಭಿಪ್ರಾಯ ಹೇಳದೆ ಎಲ್ಲರೂ ತಮ್ಮ ಮನ ಬಂದಂತೆ ತಮ್ಮ ಘನತೆ ಕಾಪಾಡುಕೊಳ್ಳಲು ಹೇಳುತ್ತಿದ್ದಾರೆ ಎಂದುಕೊಂಡು ಸರಿ ಹೋಗಲಿ ನಿಮಗೆ ಯಾರಿಗೆ 10 ಸಹಸ್ರ ಸ್ವರ್ಣಮುದ್ರೆ ಸಿಗುವುದು ಭವಿಷ್ಯ ಹೇಳಿ ನೋಡೋಣ ಎಂದಾಗ ಎಲ್ಲರೂ ನನಗೆ ನನಗೆ ಎಂದು ಜೋರಾಗಿ ಕೂಗಾಡಿದರು.
ಕೊನಗೆ ಅಲ್ಲಿದ್ದ ವಯಸ್ಸಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು ಮುಂದೆ ಬಂದು ಸ್ವಾಮಿ ನಾನು ಹೇಳಲೇ ಇವರಲ್ಲಿ ಯಾರಿಗೆ ಪುರಸ್ಕಾರ ಸಿಗುವುದು ಎಂದು ಎಂದಾಗ ರಾಜನು ಬಹಳ ಆಶ್ಚರ್ಯದಿಂದ ಹೇಳಿ ನೋಡೋಣ ಎಂದಾಗ ಇವರೆಲ್ಲರಿಗೂ ಸ್ವರ್ಣ ಮುದ್ರಿಕೆ ಸಿಗುವುದಿರಲಿ ಈಗ ಇವರೆಲ್ಲರಿಗೂ ಹತ್ತು ಹತ್ತು ಛಡಿ ಏಟು ಕೊಡುವ ಯೋಚನೆ ಮಾಡುತ್ತಿದ್ದೀರಿ ಅಲ್ಲವೇ, ಎಂದಾಗ ರಾಜನಿಗೆ ಮತ್ತೆ ಆಶ್ಚರ್ಯವಾಗಿ ಹೌದು ನಾನು ಅದನ್ನೇ ಯೋಚಿಸುತ್ತಿದ್ದೆ, ನಿಮಗೆ ಹೇಗೆ ತಿಳಿಯಿತು ಎಂದಾಗ ಮಹಾರಾಜರೇ ನೀವು ಮೂರ್ಖರ ತರಹ ಪ್ರಶ್ನೆ ಕೇಳಿದ್ದಕ್ಕೆ ಮೂರ್ಖರ ತರಹ ಉತ್ತರ ಬಂದಿದೆ ಅಷ್ಟೇ. ಈ ಜಗತ್ತಿನಲ್ಲಿ ಯಾರು ಯಾರೊಬ್ಬರ ಭೂತ ಭವಿಷ್ಯಗಳನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಒಂದು ಕ್ಷಣದಲ್ಲಿ ಏನು ಆಗುತ್ತದೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲದಿರುವಾಗ ನಾವು ನೋಡುತ್ತಿರುವ ವರ್ತಮಾನ ಒಂದೇ ಸತ್ಯವಲ್ಲವೇ ಪ್ರಭು ಎಂದಾಗ ರಾಜನಿಗೆ ಮಹದಾನಂದವಾಯಿತು ಮತ್ತು ಆ ವ್ಯಕ್ತಿಯನ್ನು ಸನ್ಮಾನಿಸಿದನು.

ಸಂಪಾದಕರ ನುಡಿ
ಜೀವನದ ಬಗ್ಗೆ ನಮ್ಮಲ್ಲಿ ಹಲವರಿಗೆ ಅನೇಕ ಕುತೂಹಲಗಳಿರುತ್ತವೆ. ಅದರಲ್ಲೂ, ನಾವು ಹಿಂದಿನ ಜನ್ಮದಲ್ಲಿ ಏನಾಗಿದ್ದೆವು, ನಮ್ಮ ಪ್ರಾಪ್ತಿಗಳು ಯಾವ ಕಾರಣದಿಂದ ಎಂಬ ವಿಚಾರಗಳು ಹಲವು ಸೀಮಿತ ತತ್ವಶಾಸ್ತ್ರಗಳೆಂದು ಪರಿಗಣಿಸಲಾದರೂ, ಅದರಲ್ಲಿ ಅರ್ಥಪೂರ್ಣವಾದ ತತ್ವದ ನಾಟಲು ಸಾಧ್ಯ. ಈ ದಿನದ ಕತೆಯು ರಾಜನ ಕುತೂಹಲವನ್ನು ಹಾಗೂ ಭವಿಷ್ಯಕಾರರ ಪೈಪೋಟಿಯನ್ನು ಸುಂದರವಾಗಿ ಚಿತ್ರಿಸಿದೆ.
ಈ ಕಥೆಯ ತಳಹದಿ ಬಹುಸಾರಿಯವರಿಗೂ ಅನ್ವಯವಾಗುವಂಥದು. ಭವಿಷ್ಯ ತಿಳಿದುಕೊಳ್ಳಲು ಇಚ್ಚಿಸುವ ಮನಸ್ಸು ಎಷ್ಟು ಅರ್ಥಹೀನವೋ, ವರ್ತಮಾನವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಮುಖ್ಯ. ಮುಂದೇನು ಆಗಬಹುದು ಎಂಬುದನ್ನು ಯಾರಿಗೂ ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ, ಇಂದಿನ ಕ್ಷಣವನ್ನು ಸೂಕ್ತವಾಗಿ ಉಪಯೋಗಿಸಿಕೊಂಡರೆ, ಜೀವನ ಸಾರ್ಥಕವಾಗಬಹುದು.
ಇಂತಹ ಸೂಕ್ಷ್ಮ ಸಂದೇಶಗಳನ್ನು ಹಾಸ್ಯ, ವ್ಯಂಗ್ಯ ಮತ್ತು ತಾತ್ವಿಕತೆಗಳ ಸಹಾಯದಿಂದ ಸಾರುವ ಈ ಕಥೆಯನ್ನು ಓದುಗರಿಗೆ ಸಮರ್ಪಿಸುತ್ತಿದ್ದೇವೆ. ಇದನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
-– ಜಿ.ಎಲ್. ನಟರಾಜು, ಮುಖ್ಯ ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4