ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಕೊರಟಗೆರೆ ಬೆಸ್ಕಾಂ ಉಪ ವಿಭಾಗದ ಕಚೇರಿ ಮುಂದೆ ಬೆಸ್ಕಾಂ ನೌಕರರು ಹಾಗೂ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಬೃಹತ್ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊರಟಗೆರೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಪ್ರಸನ್ನ ಕುಮಾರ್, “ಕೇಂದ್ರ ಸರ್ಕಾರವು ವಿದ್ಯುತ್ ಪ್ರಸರಣ ಹಾಗೂ ಸರಬರಾಜು ನಿಗಮಗಳನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಜಾರಿ ಮಾಡಲು ಹೊರಟಿರುವ ‘ವಿದ್ಯುತ್ ತಿದ್ದುಪಡಿ ಕಾಯ್ದೆ–೨೦೨೬’ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು. ಬೆಸ್ಕಾಂ ಸೇರಿದಂತೆ ರಾಜ್ಯದ ಇನ್ನಿತರ ವಿದ್ಯುತ್ ಪ್ರಸರಣಾ ಕೇಂದ್ರಗಳು ಸಾವಿರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯಾಗಿದೆ. ಬೃಹತ್ ಸೌಕರ್ಯ, ಉಪ ಕೇಂದ್ರಗಳು ಹಾಗೂ ಯಂತ್ರೋಪಕರಣಗಳನ್ನು ಹೊಂದಿರುವ ಈ ಸಂಸ್ಥೆಗಳ ಮೂಲಕ ನೌಕರರು ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಹೀಗಿದ್ದೂ ಇದನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಹೊರಟಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ನೀಡಿದರೆ ಅವರು ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿ, ಮೊಬೈಲ್ ಕಂಪನಿಗಳಂತೆ ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ವ್ಯವಸ್ಥೆ ತರುತ್ತಾರೆ. ಇದರಿಂದಾಗಿ ಬಡವರು, ಕೂಲಿ ಕಾರ್ಮಿಕರು, ವೃದ್ಧರು ಹಾಗೂ ರೈತರಿಗೆ ಸಿಗುತ್ತಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿದಂತೆ ಉಚಿತ ವಿದ್ಯುತ್ ಯೋಜನೆಗಳು ಮುಂದಿನ ದಿನಗಳಲ್ಲಿ ರದ್ದಾಗಲಿವೆ. ಆದ್ದರಿಂದ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಬಾರದು” ಎಂದು ಪ್ರಸನ್ನ ಕುಮಾರ್ ಒತ್ತಾಯಿಸಿದರು.
ಮೊಬೈಲ್ ನಂತೆ ಕರೆನ್ಸಿ ಹಾಕಿಸುವ ಪರಿಸ್ಥಿತಿ ಬರಲಿದೆ: ಕೆ.ವಿ. ನಟರಾಜು
ಕೊರಟಗೆರೆ ಉಪವಿಭಾಗದ ನೌಕರರ ಸಂಘದ ಕಾರ್ಯದರ್ಶಿ ಕೆ.ವಿ. ನಟರಾಜು ಮಾತನಾಡಿ, “ವಿದ್ಯುತ್ ವ್ಯವಸ್ಥೆ ಖಾಸಗೀಕರಣಗೊಂಡರೆ ಮೊಬೈಲ್ ಸೇವೆಗಳಂತೆ ಹಣ ಪಾವತಿಸಿ ಕರೆನ್ಸಿ ಹಾಕಿಸಿಕೊಂಡೇ ವಿದ್ಯುತ್ ಬಳಸಬೇಕಾದ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ರೈತರ ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ಸಿಗದೆ ಕೃಷಿ ಕ್ಷೇತ್ರ ಸಂಪೂರ್ಣ ನಾಶವಾಗಲಿದೆ. ಸರ್ಕಾರ ತಕ್ಷಣವೇ ಖಾಸಗೀಕರಣದ ನಿರ್ಧಾರವನ್ನು ಕೈಬಿಡಬೇಕು” ಎಂದರು.
ಈ ಮಹತ್ವದ ಪ್ರತಿಭಟನೆಯಲ್ಲಿ ಕೆಪಿಟಿಸಿಎಲ್ ೬೫೯ ನೌಕರರ ಸಂಘದ ಅಧಿಕ ಕಾರ್ಯದರ್ಶಿ ಹೆಚ್. ತಿಮ್ಮಪ್ಪ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಕೊರಟಗೆರೆ ಉಪ ವಿಭಾಗದ ನೌಕರರ ಸಂಘದ ಅಧ್ಯಕ್ಷ ಹೆಚ್. ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ವಿ. ನಟರಾಜು, ಸುನಿಲ್ ಕುಮಾರ್, ಸಹಾಯಕ ಇಂಜಿನಿಯರ್ ಯೋಗೀಶ್, ಕಿರಿಯ ಇಂಜಿನಿಯರ್ ಮಲ್ಲಯ್ಯ, ಕಂದಾಯ ಶಾಖೆಯ ಜೆ.ಡಿ. ರಾಘವೇಂದ್ರ, ಕೆ.ವಿ. ಮಂಜುಳಾ, ಫಾತಿಮಾ ಭಾಗವಹಿಸಿದ್ದರು.
ಅಲ್ಲದೆ, ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಲಕ್ಷ್ಮೀಕಾಂತ ಬಾಬು, ಮೂಡ್ಲಗಿರಿಯಪ್ಪ, ಗೋವಿಂದರಾಜು, ವೆಂಕಟೇಶ್, ಹೊಸಕೋಟೆ ಮುತ್ತುರಾಜ್ ಸೇರಿದಂತೆ ಬೆಸ್ಕಾಂ ನೌಕರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ರೈತ ಸಂಘದ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿ ಖಾಸಗೀಕರಣದ ವಿರುದ್ಧ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


